Monday, July 13, 2009

ಅಜ್ಜೀ ಹತ್ರ ತಲೆ ಸವರಿಸಿಕೊಂಡಿದ್ದೀರಾ?ಅದರ ಸುಖ ಗೊತ್ತೇ?

ಈಗಿನ್ನೂ ನಾನೂ ನನ್ನ ಬಾಲ್ಯ ನೆನಪಿಸಿಕೊಂಡು ಒಂದು ಲೇಖನ ಬರೆದೆ. ಚಂದ್ರಶೇಕರ್ ಲೇಖನವೂ ಕಣ್ಣಿಗೆಬಿತ್ತು."ಬಾಲ್ಯದ ನೆನಪು" ನೇರಲೆ ಹಣ್ಣು ತಿಂದಷ್ಟೇ ಸಂತೋಶವಾಯ್ತು . ಯಾಕೆ ಗೊತ್ತಾ? ನಾನೇ ಸ್ವತ: ದನಾ ಕಾಯ್ತಿದ್ದೆ ರೀ. ನಮ್ಮನೇಲೀ ನಮ್ಮಜ್ಜಿ ಇದ್ರು. ಮಲಗಿದ್ದಬಳೀ ಮಲಗಿಕೊಂಡಿದ್ದರೂ ಸದಾಕಾಲ ಮನೆಯ ಆಗುಹೋಗುಗಳ ಚಿಂತೆ ಅವರಿಗೆ. ಆಗಾಗ ಟೈಮ್ ಕೇಳೀ ಕೇಳೀ " ದನಾ ಬೆಟ್ಟಕ್ಕಟ್ಟಿದಿರಾ? ಹಸುಗೆ ಕಲಗಚ್ಚು ಇನ್ನೂ ಇಡಲಿಲ್ಲವೇ? ಹಸು ಕರು ಬಿಟ್ಟರಾ? ಹೀಗೆ ಕಾಲಕಾಲಕ್ಕೆ ಎಲ್ಲಾ ಕೆಲಸಾನೂ ಹೇಳಿ ಹೇಳಿ ಮಾಡಿಸ್ತಾ ಇದ್ರೂ, ಮಲಗಿದ್ದ ಬಳಿಯೇ!
ಮದ್ಯಾಹ್ನ ನಾಲ್ಕು ಗಂಟೆ ಯಾಯ್ತೆಂದ್ರೆ ಸಾಕು" ದನಾ ಹೊಡ್ಕೊ೦ಡ್ ಬರೋಕೆ ಯಾರು ಹೋದ್ರು? ನಾಗೂ ನೇ[ನಮ್ಮಪ್ಪ] ಅವ್ನಾದ್ರೆ ಇವತ್ತು ದನಗಳಿಗೆ ದೊಡ್ಡೀನೇ ಗತಿ. ಶ್ರೀಧರನೇ? ಅವನಾದ್ರೆ ಎಲ್ಲಿದ್ದರೂ ಹೊಡೆದುಕೊಂಡೆ ಬರ್ತಾನೆ. ನನ್ನ ಬಗ್ಗೆ ಅದೆಂತಹಾ ವಿಶ್ವಾಸ ಇತ್ತೆಂದರೆ....ಅದರಿಂದ ಅವರು ಹೊಗಳಲೀ ಅಂತಾನೇ ನಾನು ಮೈ ಮುರಿದು ಕೆಲಸ ಮಾಡೀ ಮಾಡೀ ಹೊಗಳಿಸಿಕೊಳ್ಳುತ್ತಿದ್ದೆ. ಈಗಲೂ ಹಾಗೇ ಅನ್ನಿ. ಇರಲಿ. ಅದೇ ಕಥೆ ಇನ್ನೂ ಪೂರ್ತಿ ಆಗಿಲ್ಲ. ನಮ್ಮೂರಲ್ಲಿ ಮೂರು ಬೆಟ್ಟಗಳ ಸಾಲು. ಚಿಕ್ಕಬೆಟ್ಟ, ದೊಡ್ಡಬೆಟ್ಟ, ಗೋರೀ ಬೆಟ್ಟ ಅಂತಾ ಹೆಸರು. ನಮ್ಮಪ್ಪ ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ ಚಿಕ್ಕ ಬೆಟ್ಟಕ್ಕೆ ದನಗಳನ್ನು ಹೊಡೆದುಕೊಂಡು ಬಿಟ್ಟು ಬಂದರೆ ಅವು ಮೇಯುತ್ತಾ ಮೇಯುತ್ತಾ ಚಿಕ್ಕಬೆಟ್ಟದಿಂದ, ಗೋರೀ ಬೆಟ್ಟ, ಬಳಸಿಕೊಂಡು ಸಂಜೆಹೊತ್ತಿಗೆ, ದೊಡ್ಡ ಬೆಟ್ಟದಲ್ಲಿರುತ್ತಿದ್ದವು. ಸಂಜೆ ಸ್ಕೂಲ್ ಮುಗಿಸಿ ನಾನು ಬೆಟ್ಟದ ಬುಡಕ್ಕೆ ಹೋಗಿ ನನ್ನ ಟೆಲಿಸ್ಕೋಪಿಕ್ ಕಣ್ಣುಗಳಿಂದ ದೃಷ್ಟಿ ಹಾಯಿಸಿ ನೋಡಿದರೆ ದೊಡ್ದಬೆಟ್ಟದಲ್ಲಿ ಎಲ್ಲಾದರೂ ಒಂದುಕಡೆ ಮೇಯ್ತಿರೋದು ಕಣ್ಣಿಗೆ ಬೀಳ್ತಿತ್ತು. ಆಗ ಅಲ್ಲಿಗೆ ಹೋಗಿ ದನ ಅಟ್ಟಿಕೊಂಡು ಬರ್ತಿದ್ದೆ. ಒಂದಿನಾ ಏನಾಯ್ತು, ಗೊತ್ತಾ? ನನಗೆ ಕೆಳಗಿನಿಂದ ದನ ಕಾಣ್ಲಿಲ್ಲ. ಹೀಗೆ ಅದೆಷ್ಟೋ ದಿನ ಆಗ್ತಿತ್ತು. ಸರೀ ಹುಡುಕಿಕೊಂಡು ಹೊರಟೆ. ನಾನು ದೊಡ್ದಬೆಟ್ಟದ ನೆತ್ತಿಯಲ್ಲಿದ್ದೀನಿ. ಅಲ್ಲಿಂದ ನೋಡಿದರೆ ಕೆಳಗಡೆ ಬೀರನಹಳ್ಳಿಯ ಹೊಲದಲ್ಲಿ ದನಗಳು ಜೋಳ ಮೇಯ್ತಿವೆ! ಅಲ್ಲಿಂದ ನೇರ ಕೆಳಕ್ಕೆ ಓಡುತ್ತಾ ಬಂದೆ ನೋಡಿ! ಅಬ್ಭಾ! ಇವತ್ತು ನೆನಸಿ ಕೊಂಡರೆ, ನನಗೇ ಆಶ್ಚರ್ಯ ವಾಗುತ್ತೆ! ಈಗ ಯಾರು ನೋಡಿದರೂ ಅಸಾಧ್ಯವೆಂದೇ ಹೇಳ್ತಾರೆ! ಆದರೆ ಅವತ್ತು ಅದು ಸಾಧ್ಯವಾಯ್ತು.ಸಂಜೆ ಸ್ವಲ್ಪ ಲೇಟಾಗಿ ಮನೆಗೆ ದನಾಹೊಡೆದುಕೊಂಡುಬಂದು ನಮ್ಮಜ್ಜಿ ಹತ್ತಿರ ನನ್ನ ಸಾಹಸದ ಕಥೆ ಹೇಳಿ ,ಅವರ ಮುಂದೆ ಹೀರೋ ಪೋಸ್ ಕೊಟ್ಟು , ಅವರ ಬಳೀ ಕೂತ್ಕೊಂಡು ತಲೆ ಸವರಿಸಿಕೊಂದಿದ್ದನ್ನು ನೆನಪಿಸಿಕೊಂಡ್ರೆ, ಇವತ್ತಿನ ಯಾವ ಸುಖಕ್ಕೂ ಅದು ಕಮ್ಮಿ ಇರಲಿಲ್ಲ.

ಚಿತ್ರ ಕೃಪೆ: Tagged.com

ಈ ಮಗೂನೇ ಕಣ್ ಮುಚ್ಚಿಕೊಂಡು ಕುಳಿತಿರುವಾಗ ನಾವೂ ಕಣ್ ಮುಚ್ಚಿಕೊಂಡು ಸ್ವಲ್ಪ ಹೊತ್ತು ಎಲ್ಲಾ ಮರೆತು ಕುಳಿತುಕೊಳ್ಳಬಾರದೇಕೆ? ಪ್ರಯತ್ನ ಪಟ್ಟು ನೋಡಿ. ಎಷ್ಟು ಹೊತ್ತು ನಿರಂತರವಾಗಿ ಕಣ್ಣುಮುಚ್ಚಿ ಕುಳಿತುಕೊಳ್ಳಲು ಸಾಧ್ಯವಾಯ್ತು? ಆಗ ನಿಮಗೇನನ್ನಿಸಿತು? ತಿಳಿಸ್ತೀರಾ? ಈಗ ನಾನೆದ್ದು ಹೊರಟೆ, ನಾನೂ ಸುಮ್ನೆ ಕುಳಿತು ನೋಡ್ತೀನಿ, ಆಗಿಂದಾಗ್ಗೆ ನೋಡ್ತಾನೇ ಇರ್ತೀನಿ. ಇವತ್ತು ಏನನ್ನಿಸ್ತು ಅಂತಾ ಕೊನೇಗೆ ಹೇಳ್ತೀನಿ.

ಗುರು

ಚಿತ್ರ ಕೃಪೆ: ಶ್ರೀ ರಮಣ ವೆಬ್ ಸೈಟ್

ನಿನ್ನೆ ಸತ್ಸಂಗದಲ್ಲಿ ನಮ್ಮ ಗುರುಗಳಿಗೆ ನನ್ನ ಮಿತ್ರ ನೊಬ್ಬ ಒಂದು ಉತ್ತಮ ಪ್ರಶ್ನೆ ಕೇಳಿದ. ಅವನು ಕೇಳಿದ ಪ್ರಶ್ನೆ ,ಅದಕ್ಕೆ ನಮ್ಮ ಗುರುಗಳ ಉತ್ತರವನ್ನು ಯಥಾವತ್ತಾಗಿ ತಿಳಿಸುವ ಪ್ರಯತ್ನ ಮಾಡುವೆ.

ಪ್ರಶ್ನೆ: ನಮಗೇನೋ ಒಬ್ಬ ಸದ್ ಗುರುವಿನ ಸಾಮಿಪ್ಯ ದೊರೆತಿದೆ, ಆದರೆ ಪ್ರಪಂಚದಲ್ಲಿ ಕೋಟಿ ಕೋಟಿ ಜನರಿಗೆ ಯಾವ ಗುರುವಿನ ಮಾರ್ಗದರ್ಶನ ಸಿಕ್ಕುವುದಿಲ್ಲ, ಅವರ ಗತಿ ಏನು?

ಪ್ರಶ್ನೆ ಕೇಳುವಾಗ " ಅವರ ಗತಿಏನು ಅಂತಾ ಕೇಳಿದನೋ ಅಥವಾ ಆ ಅರ್ಥ ಬರುವಂತೆ ಬೇರೆ ಪದ ಉಪಯೀಗಿಸಿದನೋ ,ಒಟ್ಟಿನಲ್ಲಿ ಈ ಅರ್ಥದಲ್ಲಿ ಪ್ರಶ್ನೆ ಕೇಳಿದ.

ಗುರುಗಳ ಉತ್ತರ:

ಮೊದಲು ನಿನ್ನ ಬಗ್ಗೆ ಯೋಚಿಸೋಣ.ಆಮೇಲೆ ಉಳಿದದ್ದು. ನಿನಗೆ ಒಬ್ಬ ಸದ್ಗುರು ಸಿಕ್ಕಿದ್ದಾನೆಂದು ಹೇಗೆ ಹೇಳುವೆ? ಅದು ನಿನ್ನ ಭಾವನೆ. ನೀನು ಯಾವ ಭಾವನೆಯಲ್ಲಿ ಯಾರನ್ನು ನೋಡುತ್ತೀಯೋ ಅದರಂತೆ ಅವನು ನಿನಗೆ ಗೋಚರಿಸುತ್ತಾನೆ.ನೀನು ಗುರು ಎಂದುಭಾವಿಸಿದರೆ ಅವನು ನಿನಗೆ ಗುರು, ಅವನು ಕಳ್ಳನೆಂದು ನೀನುಭಾವಿಸಿದರೆ ಕಳ್ಳನಾಗಿ, ಒಟ್ಟಿನಲ್ಲಿ ಅದೆಲ್ಲಾ ನಿನ್ನಭಾವನೆ.

ಆದ್ದರಿಂದ ಒಬ್ಬನನ್ನು ಗುರು ಎಂದು ಒಪ್ಪುವ ಮುಂಚೆ ನೂರೆಂಟು ಭಾರಿ ಅಳೆದು-ಸುರಿದು ನೋಡು, ಚಿನ್ನವನ್ನು ಒರೆಗೆ ಹಚ್ಚುವಂತೆ ಒರೆಗೆ ಹಚ್ಚಿ ನೋಡು, ನಿನಗೆ ಸಮಾಧಾನವಾದರೆ ಗುರು ಎಂದು ನಂಬು, ನಿನಗೆ ಪೂರ್ಣ ನಂಬಿಕೆ ಬರದೆ ಒಪ್ಪಬೇಡ, ಆದರೆ ನಂಬಿದಮೇಲೆ ಸಂದೇಹಿಸಬೇಡ. ನೀನು ನಂಬಿದ ಗುರುವನ್ನು ಸಂದೇಹಿಸಲುಶುರುಮಾಡಿದರೆ ಮಹ ಪಾಪಕ್ಕೆ ಬಲಿಯಾಗುತ್ತೀಯ. ಯಾವನನ್ನೂ ಗುರುವೆಂದು ಒಪ್ಪದವನು ಏನು ಮಾಡಿದರೂ ನಡೆಯುತ್ತೆ, ಆದರೆ ಒಮ್ಮೆ ಗುರುವೆಂದು ಮನಸಾ ಒಪ್ಪಿ ನಿನ್ನಲ್ಲಿ ಸಂದೇಹ ಶುರುವಾದರೆ ನೀನು ಗುರುವಿನ ಅವಕೃಪೆಗೆ ಬಲಿಯಾಗುತ್ತೀಯ. ಆದ್ದರಿಂದ ನಿನಗೆ ಪೂರ್ಣ ಒಪ್ಪಿಗೆ ಯಾದಮೇಲೆ ನಂಬಿದ ಗುರುವಿಗೆ ಆತ್ಮಪೂರಕವಾಗಿ ಶರಣಾಗು, ನೀನು ನಂಬಿದ ಗುರು ನಿನ್ನನ್ನು ಕೈ ಹಿಡಿದು ಮುನ್ನಡೆಸುತ್ತಾನೆ. ನೀನುಭಗವಂತನೆಡೆಗೆ ಒಂದು ಹೆಜ್ಜೆ ಇಡಲು ಪ್ರಯತ್ನಿಸಿದರೆ, ಅವನು ನಿನ್ನನ್ನು ಹತ್ತು ಹೆಜ್ಜೆ ಮುನ್ನಡೆಸುತ್ತಾನೆ,ಆದರೆ ಅವನಲ್ಲಿ ಪೂರ್ಣಶರಣಾದಾಗ ಮಾತ್ರ ಅದು ಸಾಧ್ಯ.

-------------------------------------------------------

ಈ ಬಗ್ಗೆ ನನ್ನ ಅನಿಸಿಕೆ:

ನಿಜ, ಯಾವ ಭಾವನೆಯಿಂದ ನಾವು ನೋಡುತ್ತೇವೆಯೋ ಹಾಗೆ ಗೋಚರವಾಗುತ್ತದೆ. ಅದು ವಸ್ತು ವಾಗಿರಬಹುದು,ವಿಷಯವಾಗಿರಬಹುದು, ಅಥವಾ ವ್ಯಕ್ತಿ ಯಾಗಿರಬಹುದು.ಯದ್ಭಾವಂ ತದ್ಭವತಿ. ಅನೇಕ ವೇಳೆ ಹಾಗೆ ನನಗೆ ಅನ್ನಿಸಿದುಂಟು. ಒಬ್ಬ ವ್ಯಕ್ತಿಯ ಬಗ್ಗೆ ಅವ ಕೆಟ್ಟವನೆಂದು ಅನೇಕರು ಹೇಳಿದ್ದರೂ ಸಹ ನಮಗೆ ಅವನು ಒಳ್ಳೆಯವನಾಗಿಯೇ ಕಾಣಬಹುದು.ಅದೇ ರೀತಿ ಒಳ್ಳೆಯದು-ಕೆಟ್ಟದೆಂಬುದೂ ಕೂಡ ಸಾರ್ವತ್ರಿಕ ಸತ್ಯವಲ್ಲ.ಅವನ ದೃಷ್ಟಿಯಲ್ಲಿ ಅವನಿಗೆ ಅದು ಒಳ್ಳೆಯದು ಅಥವ ಕೆಟ್ಟದಾಗಿ ಕಾಣಿಸುತ್ತದೆ, ಆದರೆ ಎಲ್ಲರಿಗೂ ಅದು ಹಾಗೆ ಕಾಣಬೇಕಿಲ್ಲ. ಆದ್ದರಿಂದ ಯಾರು ಏನೇ ಹೇಳಿದರೂ ನಮ್ಮಆತ್ಮ ಸಾಕ್ಷಿಗನುಗುಣವಾಗಿ ನಾವು ವರ್ತಿಸುವುದು ವಿವೇಕಯುತ ನಡೆ ಯಾಗಬಲ್ಲದು.ಇದನ್ನು ನಮ್ಮ ನಮ್ಮ ವಿವೇಚನೆ ಎಂದೂ ಹೇಳಬಹುದು.

ಚಿತ್ರ ಕೃಪೆ:ಶ್ರೀಶಾರದಾ ಪೀಠಮ್ ವೆಬ್ಸೈಟ್. ಬರಹ ಆಧಾರ:ವೇದ ತರಂಗ ಮಾಸ ಪತ್ರಿಕೆ

ಶ್ರೀ ಶಂಕರಾಚಾರ್ಯರು ಮಾನವರಿಗೆ ಎಚ್ಚರಿಕೆಯ ಏಳು ಗಂಟೆಗಳನ್ನು ಭಾರಿಸುತ್ತಾರೆ.

-೧-

ಮಾತಾ ನಾಸ್ತಿ ಪಿತಾ ನಾಸ್ತಿ, ನಾಸ್ತಿ ಬಂಧು ಸಹೋದರ:| ಅರ್ಥಂ ನಾಸ್ತಿ ಗೃಹಂ ನಾಸ್ತಿ " ತಸ್ಮಾತ್ ಜಾಗ್ರತ ಜಾಗ್ರತ"||

ತಾಯಿ-ತಂದೆ,ಬಂಧು-ಸಹೋದರ, ಹಣ, ಮನೆ, ಯಾವುದೂ ಸತ್ಯವಲ್ಲ , ಆದ್ದರಿಂದ ಹುಷಾರಾಗಿರಿ, ಎಚ್ಚರಿಕೆ, ಎಚ್ಚರಿಕೆ!!

-೨-

ಜನ್ಮ ದು:ಖಂ ಜರಾ ದುಖಂ, ಜಾಯಾ ದು:ಖಂ ಪುನ: ಪುನ:| ಸಂಸಾರ ಸಾಗರಂ ದುಖಂ,ತಸ್ಮಾತ್ ಜಾಗ್ರತ ಜಾಗ್ರತ||

ಜನ್ಮವೂ ದು:ಖವೇ, ಮುಪ್ಪೂ ದು:ಖವೇ, ಪತ್ನಿಯೂ ದು:ಖವೇ, ಇಷ್ಟೇ ಏಕೆ? ಸಂಸಾರ ಸಾಗರವೇ ದು:ಖ,ನೆನಪಿರಲಿ,ಎಚ್ಚರಿಕೆ, ಎಚ್ಚರಿಕೆ!!

-೩-

ಕಾಮ: ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾ:| ಜ್ಞಾನರತ್ನಾಪಹಾರಾಯ ತಸ್ಮಾತ್ ಜಾಗ್ರತ ಜಾಗ್ರತ||

ಕಾಮಕ್ರೋಧಗಳೆಂಬ ಕಳ್ಳರು ನಿನ್ನೊಳಗೇ ಇರುವ ಜ್ಞಾನರತ್ನವನ್ನು ಅಪಹರಿಸುವುದಕ್ಕಾಗಿ ಹೊಂಚುಹಾಕುತ್ತಿದ್ದಾರೆ.ಎಚ್ಚರಿಕೆ, ಎಚ್ಚರಿಕೆ!!

-೪-

ಆಶಯಾ ಬಧ್ಯತೇ ಲೋಕ: ಕರ್ಮಣಾ ಬಹು ಚಿಂತಯಾ| ಆಯು: ಕ್ಷೀಣಂ ನ ಜಾನಾತಿ ತಸ್ಮಾತ್ ಜಾಗ್ರತ ಜಾಗ್ರತ||

ಆಶೆಯಿಂದ, ಕರ್ಮದಿಂದ,ಚಿಂತೆಯಿಂದ ಮನುಷ್ಯನು ಬದ್ಧನಾಗಿರುತ್ತಾನೆ. ಆಯುಷ್ಯವು ಸವೆಯುತ್ತಿದ್ದರೂ ಅದನ್ನು ಗಮನಿಸುತ್ತಿಲ್ಲ,ಎಚ್ಚರಿಕೆ, ಎಚ್ಚರಿಕೆ!! -೫-

ಸಂಪದ: ಸ್ವಪ್ನಸಂಕಾಶಾ:,ಯೌವನಂ ಕುಸುಮೋಪಮಮ್| ವಿದ್ಯುಚ್ಚಂಚಲಮಾಯುಷ್ಯಂ ತಸ್ಮಾತ್ ಜಾಗ್ರತ ಜಾಗ್ರತ||

ಸಂಪತ್ತು ಸ್ವಪ್ನಸಮಾನ, ಯೌವನವು ಹೂವಿನಂತೆ ಬಾಡುತ್ತಿದೆ, ಆಯುಷ್ಯವಂತೂ ಮಿಂಚಿನಂತೆ ಹಾರಿಹೋಗುತ್ತಿದೆ,ಎಚ್ಚರಿಕೆ, ಎಚ್ಚರಿಕೆ!!

-೬-

ಕ್ಷಣಂ ವಿತ್ತಂ, ಕ್ಷಣಂ ಚಿತ್ತಂ,ಕ್ಷಣಂ ಜೀವಿತಮೇವಚ|

ಯಮಸ್ಯ ಕರುಣಾ ನಾಸ್ತಿ,ತಸ್ಮಾತ್ ಜಾಗ್ರತ ಜಾಗ್ರತ||

ವಿತ್ತ, ಚಿತ್ತ,ಜೀವಿತ ಎಲ್ಲವೂ ಕ್ಷಣಿಕವೇ.ಯಮನಿಗೆ ದಯೆ ಎಂಬುದಿಲ್ಲ,ಆದ್ದರಿಂದ ಎಚ್ಚರಿಕೆ, ಎಚ್ಚರಿಕೆ!!

-೭-

ಅನಿತ್ಯಾಣಿ ಶರೀರಾಣಿ ವಿಭವೋ ನೈವ ಶಾಶ್ವತಾ:|

ನಿತ್ಯಂ ಸನ್ನಿಹಿತೋ ಮೃತ್ಯು:, ತಸ್ಮಾತ್ ಜಾಗ್ರತ ಜಾಗ್ರತ||

ದೇಹಗಳು ಅನಿತ್ಯ,ಸಂಪತ್ತೆಲ್ಲವೂ ಅಶಾಶ್ವತ, ಮರಣವು ಹತ್ತಿರದಲ್ಲಿದೆ,ಆದ್ದರಿಂದ ಎಚ್ಚರಿಕೆ, ಎಚ್ಚರಿಕೆ!!

ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲೇನು ?

ಹಳಸಿನಹಣ್ಣು ಅಪರೂಪಕ್ಕೆ ಮನೆಗೆ ತಂದಿದ್ದೆ. ನಮ್ಮ ಪಕ್ಕದ ಮನೆ ಸೂರಿ ಬಂದ.ಅಂಕಲ್ , ಹಳಸಿನ ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ? ಅಂತಾ ಹೇಳ್ತಾ ನನ್ನ ಉತ್ತರವನ್ನೂ ಕೇಳದೆ ಪಕ್ಕದಲ್ಲಿ ಕುಳಿತು ನಾನು ಹಣ್ಣು ಕೊಯ್ದಂತೆಲ್ಲಾ ಅದರಿಂದ ತೊಳೆ ಬಿಡಿಸುತ್ತಾ, ಮಧ್ಯೆ ಮಧ್ಯೆದಲ್ಲಿ , ಒಂದು ತೊಳೆ ರುಚಿ ನೋಡ್ತೀನಿ, ಅಂತಾ ಹಣ್ಣು ಬಿಡಿಸುವುದರಲ್ಲಿ ಅರ್ಧ ಖಾಲಿ ಮಾಡಿದ್ದ.

ನನ್ನ ಮಗ " ಅಪ್ಪಾ, ಹಳಸಿನ ಹಣ್ಣು ತಿಂದ್ರೆ ಏನೂ ತೊಂದರೆ ಆಗಲ್ವಾ? ಊಟಕ್ಕಿಂತ ಮುಂಚೆ ತಿನ್ ಬೇಕೂ ಅಂತಾರೆ, ಅದರ ಬೀಜ ಸುಮ್ನೆ ಬಿಸಾಕೋದ? " ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳ್ತಾ ಕೂತಿದ್ದ. ಹಣ್ಣು ಬಿಡಿಸಿ ಮುಗಿದಮೇಲೆ ನನ್ನ ಪತ್ನಿ ಅಡಿಗೆ ಮನೆಯೊಳಗಿಂದಲೇ ಕೂಗಿ ಹೇಳಿದ್ಲು" ಪಕ್ಕದ ಮನೆಗೆ ಅರ್ಧ ಕೊಟ್ಟು ಕಳಿಸಿ, ಸೂರಿ ಅಪ್ಪಂಗೆ ಹಳಸಿನ ಹಣ್ಣು ಅಂದ್ರೆ ತುಂಬಾ ಇಷ್ಟ."

-"ಹೌದು ಅಂಕಲ್ ನಮ್ಮಪ್ಪಂಗೆ ಹಳಸಿನ ಹಣ್ಣು ಅಂದ್ರೆ ಬಲು ಇಷ್ಟ. ಆದರೆ ನಮ್ಮಮ್ಮ ಯಾವಾಗ್ಲೂ ಅವರ ಜೊತೆ ಪೇಟೆಗೆ ಹೋಗ್ದಲೇ ಇರುಲ್ಲ, ನಮ್ಮಪ್ಪ ಹಳಸಿನ ಹಣ್ಣು ತರೋದಕ್ಕೆ ಅಮ್ಮ ಬಿಡಲ್ಲ."

- ಆಯ್ತಪ್ಪ ,ಒಳಗಡೆ ಹೋಗಿ ಒಂದು ಪಾತ್ರೆ ತಗೊಂಡು ಬಾ, ಹಣ್ಣು ತಗೊಂಡು ಹೋಗು.

ಅಡಿಗೆ ಮನೆಗೆಹೋದ ಸೂರಿ ಒಂದು ಸ್ಟೀಲ್ ಬಾಕ್ಸ್ ತಂದ, ಅದಕ್ಕೆ ಎಷ್ಟು ಹಾಕಿದರೂ ಅದರ ಅರ್ಧಾನೂ ತುಂಬಲಿಲ್ಲ." ಇವು ನಾಲ್ಕು ತೊಳೆ ನಮ್ಮನೆಗಿರಲಿ, ಇದನ್ನು ತಗೊಂಡು ಹೋಗು" ಅಂತಾ ಅವನಿಗೆ ಹಣ್ಣು ಕೊಟ್ಟು ಕಳಿಸಿ ಅಂಟಾಗಿದ್ದ ನನ್ನ ಕೈ ಗೆ ಒಂದಿಷ್ಟು ಕೊಬ್ರಿ ಎಣ್ಣೆ ಹಚ್ಚಿ ಅಂಟು ತೆಗೆದು , ಹಣ್ಣಿನ ಶಾಡೆ[ಹಣ್ಣಿನ ಸಿಪ್ಪೆ] ಯನ್ನು ಎತ್ತಿ ಹೊರಗೆ ಹಾಕಿದ್ದೇ ಬಂತು.

ಹರಿಹರಪುರ ನಾರಾಯಣಪ್ಪನವರ ವಂಶ ವೃಕ್ಷ:

ಹರಿಹರಪುರ ನಾರಾಯಣಪ್ಪನವರ ವಂಶ ವೃಕ್ಷ: ವೈಯಕ್ತಿಕ ಬ್ಲಾಗ್ ಬರಹವಾದ್ದರಿಂದ ತೀರಾ ಖಾಸಗೀ ವಿಚಾರವಾದ ನನ್ನ ವಂಶವೃಕ್ಷದ ಬಗ್ಗೆ ಬರೆಯುವ ಸಾಹಸ ಮಾಡಿರುವೆ.
ಉದ್ಧೇಶ: ನಮ್ಮ ತಂದೆಯವರು ಅವರಪ್ಪ ಅಮ್ಮನ ಶ್ರಾದ್ಧ ಮಾಡುವಾಗ ಮಾಡುತ್ತಿದ್ದ ಸಂಕಲ್ಪದಿಂದ ಅವರಪ್ಪ-ಅಮ್ಮ,ಅವರ ಅಜ್ಜ-ಅಜ್ಜಿ ಹೆಸರುಗಳು ನನಗೆ ತಿಳಿಯಿತು. ಆದರೆ ನಮ್ಮ ಪೂರ್ವಿಕರು ಯಾರೂ ಅಂತಾ ಸಾಧನೆ ಮಾಡದಿದ್ದುದರಿಂದ ಅವರುಗಳ ಹೆಸರು ಸಾರ್ವಜನಿಕವಾಗಿ ದಾಖಲಾಗಿಲ್ಲ. ಅಂದ ಮಾತ್ರಕ್ಕೆ ನಮ್ಮ ಪೂರ್ವಿಕರನ್ನು ಮರೆತು ಬಿಡುವುದೇ? ಇಂದಿನ ಪೀಳಿಗೆಗೆ ನಮ್ಮ ಪೂರ್ವಿಕರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಅಷ್ಟೇನೂ ಇಲ್ಲ.ಆದರೆ ನನಗೊಂದು ನಂಬಿಕೆ ಇದೆ. ಮುಂದೆ ನಮ್ಮ ಮಕ್ಕಳು ದೊಡ್ದವರಾದಾಗ ಅವರ ಪೂರ್ವಿಕರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡಬಹುದು.ಆಗ ತಿಳಿಸಲು ಯಾರಿರುತ್ತಾರೋ ಇಲ್ಲವೋ, ಆದ್ದರಿಂದ ನನಗೆ ತಿಳಿದದ್ದನ್ನು ದಾಖಲಿಸಿದರೆ ಮುಂದೆ ನಮ್ಮ ಮಕ್ಕಳಿಗೆ ಮಾಹಿತಿ ಸುಲಭವಾಗಿ ದೊರೆಯುವುದೆಂಬ ಆಶಯ.ನಾನು ನಮ್ಮ ಪೂರ್ವಿಕರ ಬಗ್ಗೆ ಮಾಹಿತಿ ಹುಡುಕುತ್ತಾ ಹೋದಾಗ ನಮ್ಮ ಚಿಕ್ಕಜ್ಜ ಕೃಷ್ಣಪ್ಪನವರ ಇಬ್ಬರು ಮಕ್ಕಳೊಡನೆ ಹೆಚ್ಚು ಮಾಹಿತಿ ಇರಲಿಲ್ಲ. ನಮ್ಮ ದೊಡ್ದಪ್ಪ ನಾರಾಯಣಪ್ಪನವರ ಮಕ್ಕಳು ನನಗಿಂತ ಬಹಳ ಹಿರಿಯರು ಇದ್ದಾರೆ. ಅವರಲ್ಲಿಯೂ ಹೆಚ್ಚು ಮಾಹಿತಿ ಇಲ್ಲ.ನಮ್ಮೂರಲ್ಲಿ ನಮ್ಮ ದಾಯಾದಿಗಳಾದ ಚಂದ್ರಶೇಖರಯ್ಯ, ಶ್ರೀಕಂಠಯ್ಯ, ಗುಂಡಪ್ಪ, ಇವರುಗಳನ್ನು ವಿಚಾರಿಸಿದಾಗ ಅವರಹಿಂದಿನ ಮೂರು ನಾಲ್ಕು ತಲೆಮಾರಿನವರ ಹೆಸರನ್ನು ಹೇಳುತ್ತಾರೆ, ಆದರೆ ಅವರ ಪೂರ್ವಿಕರು ಮತ್ತು ನನ್ನ ಪೂರ್ವಿಕರು ಯಾವ ಒಬ್ಬ ತಂದೆಯ ಮಕ್ಕಳಾಗಿದ್ದಾರೆಂಬ ಮಾಹಿತಿ ದೊರೆಯಲೇ ಇಲ್ಲ. ಅಂತೂ ಅವರು ನಮಗೆ ದಾಯಾದಿಗಳು. ಎಷ್ಟು ತಲೆಮಾರಿನ ಹಿಂದೆ ಎಂಬ ವಿಷಯ ತಿಳಿಯುವುದೇ ಇಲ್ಲ. ನಮ್ಮಪ್ಪನಿಗೆ ತನ್ನ ಪೂರ್ವಿಕರ ಬಗ್ಗೆ ಅವರಿಗೆ ಅಪಾರ ಗೌರವ. ಅದರಿಂದಲೇ ಅವರ ಮಗನಾದ ನನಗೂ ನಮ್ಮ ಪೂರ್ವಿಕರ ಬಗ್ಗೆ ಒಂದಿಷ್ಟು ಮಾಹಿತಿ ಹಿಡಿದಿಡಬೇಕೆಂಬ ಆಸೆ. ನಮ್ಮೂರಲ್ಲಿ ಬ್ರಾಹ್ಮಣರದು ಹದಿನಾರು ಮನೆ.ಕಾಶ್ಯಪ , ಆತ್ರೇಯಸ ಮತ್ತು ಇನ್ನೊಂದು ಗೋತ್ರದ ಮೂಲಕ್ಕೆ ಸೇರಿದವರು.ಪರಾಶರ ಗೋತ್ರ ಹಾಗೂ ಮತ್ತೊಂದು ಗೋತ್ರಕ್ಕೆ ಸೇರಿದ ಮೂರುನಾಲ್ಕು ಮನೆಗಳಿವೆಯಾದರೂ ಅವರೆಲ್ಲಾ ಅರಕಲಗೂಡು ತಾಲ್ಲೂಕು ಬೆಳವಾಡಿ ಹಾಗೂ ಹೆಬ್ಬಾಲೆಯವರು, ನಮ್ಮೂರಿಗೆ ಬಂದು ಸೇರಿದವರು.ನಮ್ಮ ಮುತ್ತಜ್ಜನ ಅಜ್ಜ ಅಂದರೆ ನಾರಾಯಣಪ್ಪನವರ ತಂದೆ ಕೂಡ ಅರಕಲಗೂಡು ತಾಲ್ಲೂಕು ಜೋಡಿ ಗುಬ್ಬಿಯಿಂದ ನಮ್ಮೂರಿಗೆ ದತ್ತು ಮಗನಾಗಿ ಬಂದವರೆಂದು ಹೇಳುತ್ತಾರೆ. ದತ್ತು ಮಗನಾಗಿ ಬಂದಿದ್ದರಿಂದ ನಮ್ಮ ಪೂರ್ವಿಕರಿಗೂ ಜೋಡಿದಾರಿಕೆಯಲ್ಲಿ ಹಕ್ಕು ದೊರೆತು ನಮ್ಮಪ್ಪನೂ ಕೂಡ ಜೋಡೀದಾರ್ ಹಕ್ಕನ್ನು ಪಡೆದಿದ್ದರು. ವಂಶವೃಕ್ಷ ತಯಾರಿಸಲು ಮಾಹಿತಿ ಕೆದುಕುತ್ತಾ ಹೋದಾಗ ೧೭೯೦ ರ ವರಗಿನ ಆರು ತಲೆಮಾರುಗಳ ಮಾಹಿತಿ ಲಭ್ಯವಾಯ್ತು.ವಂಶವೃಕ್ಷ ಸಿದ್ಧಪಡಿಸುವಾಗ ಮೊದಲು ವಂಶದ ಮೂಲ ವ್ಯಕ್ತಿ, ಅವರ ಹೆಸರಿನ ಪಕ್ಕದಲ್ಲಿಯೇ ಅವರ ಜನ್ಮ ವರ್ಷ ಹಾಗೂ ಅವರ ಧರ್ಮ ಪತ್ನಿ ಹೆಸರನ್ನೂ ಕೂಡ ನಮೂದಿಸಿರುವೆ.ಆನಂತರ ನಮ್ಮ ಅಪ್ಪನ ಒಡಹುಟ್ಟಿರುವ ಎಲ್ಲರ ಪೂರ್ಣ ವಿವರ ನೀಡಿರುವೆ. ಮೂರನೇ ತಲೆಮಾರಿನವರಾದ ನಮ್ಮ ದೊಡ್ದಮ್ಮ ಕಮಲಮ್ಮ ನವರು [ದೊಡ್ಡಪ್ಪ ನಾರಾಯಣಪ್ಪನವರ ಪತ್ನಿ ] ಮಾತ್ರ ಹಿರಿತಲೆಯಾಗಿ ಉಳಿದಿರುವುದು ನಮ್ಮ ಸೌಭಾಗ್ಯ. ಇನ್ನು ವಂಶವೃಕ್ಷ ಸಿದ್ಧಪಡಿಸುವಾಗ ಹೆಣ್ಣು ಮಕ್ಕಳನ್ನೂ ಸಹ ಅವರವರ ಜನ್ಮ ಸ್ಥಾನದಲ್ಲಿ ನಮೂದಿಸಿದ್ದೇನೆ.

ಒಂದು ಬಿನ್ನಹ:

ಹರಿಹರಪುರ ನಾರಾಯಣಪ್ಪನವರ ವಂಶದಲ್ಲಿನ ಎಲ್ಲರ ಸಮಗ್ರ ಮಾಹಿತಿ ಹಿಡಿದಿಡಬೇಕೆಂಬ ಬಯಕೆ ನನ್ನದು. ಅದಕ್ಕಾಗಿ ನಾನು ಸಿದ್ಧಪಡಿಸಿರುವ ವಂಶವೃಕ್ಷವನ್ನು ಪ್ರಕಟಿಸಿರುವೆ. ಅದರಲ್ಲಿ ಒಂದು ಎರಡು ಮತ್ತು ಮೂರನೇ ತಲೆಮಾರಿನಲ್ಲಿರುವ ನನ್ನ ಬಂಧುಗಳು ಅವರವರ ಮಕ್ಕಳು ಮೊಮ್ಮಕ್ಕಳ ಬಗ್ಗೆ ಮಾಹಿತಿ ಒದಗಿಸಿದಾಗ ವಂಶವೃಕ್ಷ ಇಂದಿನಂತೆ ಪೂರ್ಣಗೊಳ್ಳುತ್ತದೆ. ಅಲ್ಲದೆ ಮುಂದಿನ ತಲೆಮಾರಿನವರಿಗೆ ಮಾಹಿತಿ ಸೇರಿಸಲು ಅನುಕೂಲ ವಾಗುತ್ತದೆ. ನಮ್ಮೂರಿನ ಅನೇಕರು ಬೆಂಗಳೂರಿನಲ್ಲಿ ಈಗ ನೆಲಸಿದ್ದಾರೆ. ಅವರಲ್ಲಿ ಅನೇಕರು ಕಾಶ್ಯಪ ಗೋತ್ರದವರೂ ಇದ್ದಾರೆ. ಯಾರಲ್ಲಾದರೂ ನಾನು ಪ್ರಕಟಿಸಿರುವ ವಂಶವೃಕ್ಷಕ್ಕೆ ಪೂರಕ ಮಾಹಿತಿ ಲಭ್ಯ ವಿದ್ದರೆ ದಯಮಾಡಿ ನನಗೆ ಪತ್ರದ ಮೂಲಕ ತಿಳಿಸಿ. ಮಾಹಿತಿ ಅಪ್ ಡೇಟ್ ಮಾಡಲು ನೆರವಾಗುತ್ತದೆ. ಅಲ್ಲದೆ ಇತ್ತೀಚಿನ ಎರಡು ಮೂರು ತಲೆಮಾರಿನ ನಮ್ಮ ಬಂಧುಗಳು ಅವರ ಕುಟುಂಬದ ವಿವರಗಳನ್ನು ದಯಮಾಡಿ ಕಳಿಸಿಕೊಡಿ. ಸಮಗ್ರ ಮಾಹಿತಿಯೊಡನೆ ಒಂದು ಪುಸ್ತಕವನ್ನು ರಚಿಸಲು ನೆರವಾದೀತು. ನಮ್ಮ ನಿಮ್ಮ ಮಕ್ಕಳಿಗೆ ನಮ್ಮ ಬಂಧು ಬಾಂಧವರ ಪರಿಚಯ ವಾಗಲು ಆ ಪುಸ್ತಕ ನೆರವಾದೀತು.

[ವಂಶ ವೃಕ್ಷ ಚಿತ್ರ ಪ್ರಕಟಿಸುವೆ.]

ತೇಟ್ ನಮ್ಮಕ್ಕ ನಂತೆ ಇದ್ದಾರಲ್ಲಾ!

ಇವತ್ತು ನನ್ನ ವಂಶವೃಕ್ಷದ ಬಗ್ಗೆ ಒಂದು ಬರಹ ಇಲ್ಲೇ ಸಂಪದದಲ್ಲಿ ಹಾಕಿದೆ. ಬಹುಶ: ಅದನ್ನು ಓದಿದ ಮಿತ್ರ ಶ್ರೀಕಾಂತ್ "ವಂಶ ವೃಕ್ಷ?" ಕುಟುಕು ಬರಹ ಹಾಕಿದ್ರು. ಪರವಾಗಿಲ್ಲ.ನಾವೆಲ್ಲಾ ಮೂಲದಲ್ಲಿ ಮಂಗನಿಂದ ಮಾನವ ರಾಗಿದ್ದೇವೆಂದು ಓದಿದ್ದೇವೆ. ಕೆಲವರು ಇನ್ನೂ ಹಾಗೆಯೇ ಉಳಿದಿದ್ದೇವೆ. ಇರಲಿ....

ನಾನೇಕೆ ವಂಶವೃಕ್ಷ ಬರೆಯಲು ಹೊರಟಿರುವೆ? ಅದರ ಹಿನ್ನೆಲೆ ಸ್ವಲ್ಪ ತಿಳಿಸಿದರೆ ಉತ್ತಮ ಅಲ್ವಾ?

ಘಟನೆ-೧:-

೧೯೭೪ ಇರಬಹುದು. ನಾನು ಬೆಂಗಳೂರಿನ ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ ತರಬೇತಿ ಪಡೆಯತ್ತಿದ್ದೆ. ಆರ್.ಎಸ್.ಎಸ್. ನಿಂದಾಗಿ ಹಲವರ ಪರಿಚಯವಾಗಿತ್ತು. ಅದರಲ್ಲಿ ಒಬ್ಬರು ವೆಂಕಟರಾಮ್.ಐ.ಟಿ.ಐ. ಕಲೊನಿಯಲ್ಲಿದ್ದ ಅವರ ಮನೆ ನನಗೆ ತುಂಬಾ ಹತ್ತಿರದ ಮನೆಯಾಯ್ತು. ಅವರ ಅಮ್ಮ ನನಗೂ ಅಮ್ಮ ಆದರು. ಅವರ ಚಿಕ್ಕಮ್ಮ ನನಗೂ ಚಿಕ್ಕಮ್ಮ ಆದರು. ಒಂದು ದಿನ ಅವರ ಮನೆಯಲ್ಲಿದ್ದೆ. ಅವರ ಮನೆಗೆ ಅವರ ಬಂಧುಗಳೊಬ್ಬರು ಬಂದರು. ಅವರ ಮಗನ ಉಪನಯನಕ್ಕಾಗಿ ಅವರನ್ನುಆಮಂತ್ರಿಸಿ ಹೋದರು. ಅವರನ್ನು ನೋಡಿದರೆ ತೇಟ್ ನಮ್ಮಕ್ಕ ನಂತೆ ಇದ್ದರು. ಇದ್ಯಾರು ಹೀಗೆ ನಮ್ಮಕ್ನಂತೆ ಇದ್ದಾರಲ್ಲಾ! ಹಾಗೇ ಯೋಚಿಸುತ್ತಾ ಕುಳಿತೆ. ಕೇಳುವಷ್ಟು ಧೈರ್ಯವಿರಲಿಲ್ಲ. ಅವರು ಆಮಂತ್ರಣ ಕೊಟ್ಟು ಹೋಗುತ್ತಲೇ ಕುತೂಹಲ ತಡೆಯಲಾರದೆ ಟೇಬಲ್ ಮೇಲಿದ್ದ ಆಮಂತ್ರಣ ಪತ್ರಿಕೆ ತೆಗೆದು ನೋಡುತ್ತೇನೆ. " ಶ್ರೀಕಂಠಯ್ಯ ಮತ್ತು ಮಕ್ಕಳು, ಗಾಂಧೀ ಬಜಾರ್ ಬೆಂಗಳೂರು" ಎಂದು ವಿಳಾಸವಿದೆ.ಈ ಹೆಸರು ನಾನೆಲ್ಲೋ ಕೇಳಿದ್ದೆನಲ್ಲಾ! ಹೂ ನೆನಪಾಯ್ತು, ಅದು ನಮ್ಮತ್ತೆ ಮಗಳುಶಾರದೆಯ ಮಾವನ ಅಂಗಡಿ ವಿಳಾಸ.ಬಂದಿದ್ದವಳು ಶಾರೆದೆಯೇ. ನಾನು ನೋಡಿಯೇ ಇಲ್ಲ. ಪರಿಚಯವಿಲ್ಲ.

ಬಂದ ಅತಿಥಿಗಳನ್ನು ಕಳಿಸಿಕೊಟ್ಟು ಚಿಕ್ಕಮ್ಮ ಮನೆಯೊಳಗೆ ಬಂದರು " ಶ್ರೀಧರಾ, ಅವರು ನಮ್ಮಕ್ಕನ ಸೊಸೆ........ " ಮಧ್ಯೆದಲ್ಲೇ ಅವರನ್ನು ತಡೆದು ನಾನು ಹೆಳಿದೆ..ಅವರ ಹೆಸರು ಶಾರದಾ"

-" ನಿನಗೆ ಹೇಗೆ ಅವರು ಗೊತ್ತೋ?

_" ಚಿಕ್ಕಮ್ಮ , ಅವರನ್ನು ನೋಡಿದಾಗಲೇ ಅಂದು ಕೊಂಡೆ" ಇವರು ನಮ್ಮಕ್ಕ ಇದ್ಧಾಗೇ ಇದಾರಲ್ಲಾ, ಅಂತಾ ಆಮಂತ್ರಣ ಪತ್ರಿಕೆ ತೆರೆದು ನೋಡಿದೆ, ನನ್ನ ಡೌಟ್ ಕ್ಲಿಯರ್ಆಯ್ತು. ಅವರು ನಮ್ಮತ್ತೆ ಸುಬ್ಬಲಕ್ಷ್ಮಿ ಮಗಳು ಶಾರದಾ ಎಂದು ದೃಢವಾಯ್ತು."

- ಮತ್ತೆ ಯಾಕೆ ನೀನು ಅವರನ್ನು ಮಾತನಾಡಿಸಲಿಲ್ಲ?

- ಇಲ್ಲಿಯವರಗೆ ಅವರನ್ನು ನಾನು ನೋಡಿಯೇ ಇರಲಿಲ್ಲ.ಅವರಾದರೋ ಶ್ರೀಮಂತರು. ನಮ್ಮ ಬಡತನದ ಮನೆಯ ಸಂಪರ್ಕ ಇಟ್ಟುಕೊಂಡಿಲ್ಲ.ನಮ್ಮತ್ತೆ ನಮ್ಮ ಮನೆಗೆ ಬರ್ತಾ ಇರ್ತಾರೆ ಅಷ್ಟೆ.

[ನಿಜವಾಗಿ ನನಗೆ ಅಂದು ಅಳು ಬಂದಿತ್ತು . ಈಗ್ಗೆ ಕೆಲವು ದಿನಗಳ ಹಿಂದೆ ನಮ್ಮತ್ತೆ ವಿಧಿವಷ ರಾದರಂತೆ]

ಘಟನೆ-೨:-

೧೯೮೨ ಇರಬಹುದು. ಅರಸೀಕೆರೆ ತಾಲ್ಲೂಕು ಬಾಣಾವರಕ್ಕೆ ನನ್ನ ಸ್ನೇಹಿತ ,ಆರ್ ಎಸ್.ಎಸ್.ಕಾರ್ಯಕರ್ತ ಸೇತೂರಾಮ್ ಮನೆಯಲ್ಲಿ ಯಾವುದೋ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿ ನನ್ನ ಮಿತ್ರ ಸೇತೂರಾಮ್ " ಇವರ್ಯಾರು ಗೊತ್ತಾ? ಅಂತಾ ಒಬ್ಬರನ್ನು ತೋರಿಸಿ ನನ್ನನ್ನು ಕೇಳಿದರು. ನನಗೆ ಗೊತ್ತಿಲ್ಲಾ ಎಂದೆ. ಅವರೇ ಹೇಳಿದರು " ಇವರು ನಿಮ್ಮ ಭಾವ ನರಸಿಂಹ ಮೂರ್ತಿ, ಬೇಲೂರಿನಲ್ಲಿ ಕೆ.ಇ.ಬಿ.ನಲ್ಲಿ ಇಂಜಿನಿಯರ್’ ಆಗ ಗೊತ್ತಾಯ್ತು. ಅವರ ಹೆಸರು ಕೇಳಿದ್ದೆ ನಮ್ಮ ದೊಡ್ದಪ್ಪ ನಾರಾಯಣಪ್ಪ ನವರ ಅಳಿಯ ನರಸಿಂಹ ಮೂರ್ತಿ. ನನಗೆ ಭಾವ. ಅಂತೂ ನಮ್ಮ ಪುನರ್ ಮಿಲನಕ್ಕೆ ಸೇತೂರಾಮ್ ಸೇತುವೆ ಯಾದರು. ಸೇತೂ ರಾಮ್ ಗೆ ಮುಂಚಿನಿಂದ ನರಸಿಂಹ ಮೂರ್ತಿ ಪರಿಚಿತರು. ಅವರ ವಿವರ ಎಲ್ಲಾ ಸೇತೂರಾಮ್ ಗೆ ಗೊತ್ತಿತ್ತು. ಘಟನೆ-೩: ಇದು ಈಗ್ಗೆ ಎರಡು ಮೂರು ವರ್ಷಗಳ ಮಾತು ಅಷ್ಟೆ. ಹಾಸನದ ಬಶೆಟ್ಟಿಕೊಪ್ಪಲ್ ರಸ್ತೆಯಲ್ಲಿ ನಾನು ನಡೆದು ಹೋಗುತ್ತಿದ್ದೆ. ಎದುರಿನಿಂದ ಒಬ್ಬ ಕಾಲೇಜು ಹುಡುಗಿ ಇನ್ನೊಬ್ಬ ಹೆಂಗಸರನ್ನು ಕೂರಿಸಿಕೊಂಡು ಸ್ಕೂಟಿಯಲ್ಲಿ ನನ್ನೆದುರು ಬಂದಳು. ಸ್ಕೂಟಿಯಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಹೆಂಗಸು ನನ್ನನ್ನು ಕಂಡಕೂಡ್ಲೆ ಸ್ಕೂಟಿಯನ್ನು ನಿಲ್ಲಿಸಲು ಹೇಳಿದರು. ಸ್ಕೂಟಿ ನಿಂತಿತು. ಆಶ್ಚರ್ಯ! ನಮ್ಮ ಪುಟ್ಟನಂಜತ್ತೆಯ ಮೊಮ್ಮಗಳು ಸುಶೀಲ ಎದಿರು ನಿಂತು" ಏನೋ ಶ್ರೀಧರ? ಅಂತಾಳೆ. ಸ್ಕೂಟಿ ಓಡಿಸುತ್ತಿದ್ದ ಅವಳ ಮಗಳು ಕಕ್ಕಾಬಿಕ್ಕಿ. ನನಗೇ ನನ್ನತ್ತೆಯ ಕುಡಿಯೊಂದು ಪರಿಚಯವಿಲ್ಲ. ನಮ್ಮ ಮಕ್ಕಳಿಗೆ ಇನ್ನೆಲ್ಲಿ ಸಾಧ್ಯ? ಇದೆಲ್ಲಾ ಘಟನೆಗಳು ನನ್ನ ತಲೆಯಲ್ಲಿ ಈಗಲೂ ಕೊರೆಯುತ್ತಿವೆ. ನಮ್ಮ ಕೌಟುಂಬಿಕ ಬಾಂಧವ್ಯ ಕಳಚಿ ಹೋಗುತ್ತಿದೆಯಲ್ಲಾ!! ಅದಕ್ಕಾಗಿ ನಮ್ಮಂತವರ ಉಸಿರಿರುವಾಗಲೇ ಬಾಂಧವ್ಯ ಉಳಿಸಲು ಏನಾದರೊಂದು ದಾರಿ ಮಾಡಲೇ ಬೇಕೆನಿಸಿದೆ. ಅದಕ್ಕೆ ಪೂರಕ ವಾಗಿ ಪ್ರಥಮ ಪ್ರಯತ್ನವಾಗಿ ನನ್ನ ತಮ್ಮನ ಮಗಳ ಮದುವೆಯನ್ನು ನಮ್ಮೂರಲ್ಲಿ ಮಾಡಿ ನಮ್ಮಪ್ಪ ನಮ್ಮಮ್ಮ ನ ಕಡೆಯ ನಮ್ಮೆಲ್ಲಾ ಬಂಧುಗಳನ್ನೂ ಮದುವೆಗೆ ಆಹ್ವಾನಿಸಿದ್ದೆವು. ಅನೇಕ ವರ್ಷಗಳ ನಂತರ ನಮ್ಮ ಹಳ್ಳಿಯಲ್ಲಿ ಮದುವೆಯ ನೆಪದಲ್ಲಿ ಸೇರಿದ ನಮ್ಮ ಬಂಧುಗಳಿಗಾದ ಸಂತೋಷಕ್ಕೆ ಪಾರವೇ ಇಲ್ಲ. ಮುಂದೆ ವರ್ಷಕ್ಕೊಮ್ಮೆ ಯಾದರೂ ಹಳ್ಳಿಯಲ್ಲಿ ಎಲ್ಲಾ ಬಂಧುಗಳನ್ನೂ ಆಹ್ವಾನಿಸಿ ಪರಸ್ಪರ ಸಂಬಂಧ ಉಳಿಯಲು ಕಾರ್ಯಕ್ರಮಗಳನ್ನು ರೂಪಿಸುವ ಆಸೆ ಇದೆ.