Tuesday, July 28, 2009

ನಮಂತಿ ಬುಧಾ ಜನಾ:

ಅಕೃತ್ವಾ ಪರಸಂತಾಪಂ ಅಗತ್ವಾ ಖಲ ನಮ್ರತಾಮ್|

ಅನುತ್ಸೃಜ್ಯಸತಾಂ ವರ್ತ್ಮ| ಯತ್ ಸ್ವಲ್ಪ ಮಿತದ್ಬಹು||

ಬೇರೆಯವರಿಗೆ ನೋವುಂಟುಮಾಡದೆ,ದುಷ್ಟರಿಗೆ ಬಗ್ಗದೆ,ಸಜ್ಜನರು ತುಳಿದ ಮಾರ್ಗವನ್ನು ಬಿಡದೆ, ಸ್ವಲ್ಪವನ್ನೇ ಮಾಡಿದರೂ ಅದು ಮಹತ್ವದ್ದೇ ಸರಿ.

ದುರ್ಜನೇನ ಸಮಂ ಸಖ್ಯಂ ವೈರಂ ಚಾಪಿ ನಕಾರಯೇತ್| ಉಷ್ಣೋ ದಹತಿ ಚಾಂಗಾರ: ಶೀತ: ಕೃಷ್ಣಾಯತೇ ಕರಂ||

ದುರ್ಜನರೊಂದಿಗೆ ಸ್ನೇಹವನ್ನಾಗಲೀ ವೈರವನ್ನಾಗಲೀ ಮಾಡಕೂಡದು.ಉರಿವ ಕೆಂಡ ಕೈಸುಟ್ಟರೆ, ತಣ್ಣಗಿನ ಇದ್ದಿಲು ಕೈಯನ್ನು ಕಪ್ಪು ಮಾಡುತ್ತದೆ.

ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಂ| ಲೋಚನಾಭ್ಯಾಂ ವಿಹೀನಸ್ಯ ದರ್ಪಣಂ ಕಿಂ ಕರಿಷ್ಯತಿ||

ಸ್ವಂತ ಬುದ್ಧಿ ಇಲ್ಲದವನಿಗೆ ಶಾಸ್ತ್ರಗಳಿಂದ ಏನೂ ಲಾಭವಿಲ್ಲ. ಕಣ್ಣೇ ಇಲ್ಲದವನಿಗೆ ಕನ್ನಡಿಯಿಂದೇನು ಪ್ರಯೋಜನ?

ನಮಂತಿ ಫಲಿತಾ ವೃಕ್ಷಾ:| ನಮಂತಿ ಬುಧಾ ಜನಾ: | ಶುಷ್ಕ ಕಾಷ್ಠಾನಿ ಮೂರ್ಖಾಶ್ಚ| ಭಿದ್ಯಂತೇನ ನಮಂತಿಚ||

ಹಣ್ಣು ಬಿಟ್ಟ ಮರಗಳು ಬಾಗುತ್ತವೆ.ವಿದ್ವಾಂಸರಾದ ಜನರು ವಿನಯದಿಂದ ಬಾಗುತ್ತಾರೆ. ಒಣಕಡ್ಡಿಗಳು ಮುರಿದುಹೋಗುತ್ತವೆ. ಬಾಗುವುದಿಲ್ಲ. ಅಂತೆಯೇ ಮೂರ್ಖ ಜನರು ನಾಶವಾದಾರೇ ಹೊರತು ಬಾಗುವುದಿಲ್ಲ.

Saturday, July 18, 2009

ಮೇಲು-ಕೀಳು ಭಾವನೆಯನ್ನು ವೇದವು ಒಪ್ಪದು

ಬ್ರಾಹ್ಮಣ

ಯಾವಾಗ ಅಜ್ಞಾನವೆಂಬುದು ಹೋಗುತ್ತದೆ,ಆಗ ಜ್ಞಾನವು ಲಭಿಸುತ್ತದೆ,ಈ ಅಜ್ಞಾನದವಿರುದ್ಧ ಹೋರಾಡಿದವನು ಬ್ರಾಹ್ಮಣನೆನಿಸಿದನು. ಇಲ್ಲಿ ಮತ್ತೆ ಜಾತಿ ಗಣನೆಗೆ ಬಾರದು.ಅವನ ಸ್ವಂತ ಯೋಗ್ಯತೆ, ಸಾಧನೆಯ ಮೇಲೆ ಅವನು ಬ್ರಾಹ್ಮಣನಾಗುತ್ತಾನೆ, ಅವನು ಯಾರ ಹೊಟ್ಟೆಯಲ್ಲಿ ಹುಟ್ಟಿದನೆಂಬುದು ಇಲ್ಲಿ ನಗಣ್ಯ. ಅವನು ಶ್ರಮ ವಹಿಸಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾನಾದ್ದರಿಂದ ಅವನು ಇಂಜಿನಿಯರ್, ಅಥವಾ ವೈದ್ಯಕೀಯ ಓದಿದ್ದರೆ ಡಾಕ್ಟರ್ ಅಥವಾ ಮತ್ಯಾರೋ.ಅವನು ಯಾರ ಮಗನೆಂಬುದು ಇಲ್ಲಿ ಗಣನೆಗೆ ಬರುವುದಿಲ್ಲ. ಅಜ್ಞಾನದ ವಿರುದ್ಧವಾಗಿ ಇವನು ಹೋರಾಡುತ್ತಿದ್ದಾನಾದ್ದರಿಂದ ಇವನು ಬ್ರಾಹ್ಮಣ. ಇವನು ಯಾರ ಹೊಟ್ಟೆಯಲ್ಲಿ ಹುಟ್ಟಿದ್ದರೇನು? ಅವನ ಹೆಸರು ಮಕಂದರ್ ಆದರೇನು? ಪೀರ್ಆದರೇನು? ಅವನು ಅವನ ಗುಣಕರ್ಮ ಸ್ವಭಾವದಿಂದ ಬ್ರಾಹ್ಮಣತ್ವ ಗಳಿಸಿದ್ದಾನಾದ್ದರಿಂದ ಅವನು ಬ್ರಾಹ್ಮಣ.ಅವರ ಅಪ್ಪ ಯಾರೂ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿಲ್ಲ.ಅವನ ಸಾಧನೆ ಏನು, ಅವನು ಸಮಾಜದ ಅಜ್ಞಾನ ಹೋಗಲಾಡಿಸಲು ಹೋರಾಡುತ್ತಿದ್ದರೆ, ಅವನು ಬ್ರಾಹ್ಮಣ.

ಕ್ಷತ್ರಿಯ

ಸಮಾಜದಲ್ಲಿರುವ ಎರಡನೆಯ ದುಷ್ಟಶಕ್ತಿ ಅನ್ಯಾಯ-ಅಧರ್ಮ.ಯಾರಲ್ಲಿ ಅನ್ಯಾಯ-ಅಧರ್ಮದ ವಿರುದ್ಧ ಹೋರಾಡುವ ಸ್ವಭಾವ ವಿದೆಯೋ, ಯಾರು ಈ ಹೋರಾಟಮಾಡುತ್ತಿದ್ದಾರೋ ಅವನು ಕ್ಷತ್ರಿಯ.ಯುದ್ಧದಲ್ಲಿ ಕಾದಾಡಿ ರುಂಡವನ್ನು ಚಂಡಾಡುವವನು ಕ್ಷತ್ರಿಯ ಎಂಬುದು ರೂಢಿಯಲ್ಲಿದೆ. ಆದರೆ ನಿಜವಾದ ಕ್ಷತ್ರಿಯ ಯಾರು? ಕ್ಷತಾತ್ ತ್ರಾಯತೇ ಇತಿ ಕ್ಷತ್ರಿಯ:, ಆಘಾತಗಳಿಂದ,ಅನ್ಯಾಯಗಳಿಂದ,ತೊಂದರೆಗಳಿಂದ ರಕ್ಷಿಸುವವನು ಕ್ಷತ್ರಿಯ.ತನ್ನ ಪ್ರಾಣವನ್ನು ಪಣವಾಗಿಟ್ಟು ಅನ್ಯಾಯ-ಅಧರ್ಮಗಳ ವಿರುದ್ಧ ಯಾರು ಹೋರಾಡುತ್ತಾನೋ ಅವನು ಕ್ಷತ್ರಿಯ. ಇಲ್ಲಿಯೂ ಕೂಡ ಅವನು ಹುಟ್ಟಿನಿಂದ ಯಾವ ಜಾತಿ[ ಈಗ ರೂಢಿಯಲ್ಲಿರುವಂತೆ] ಎಂಬುದು ನಗಣ್ಯ. ಯಾರಲ್ಲಿ ಈ ಗುಣಸ್ವಭಾವ ಇದೆಯೋ ಅವನು ಕ್ಷತ್ರಿಯ.

ವೈಶ್ಯ

ಇನ್ನೊಂದು ದುಷ್ಟ ಶಕ್ತಿ ಎಂದರೆ ಅಭಾವ. ಅಭಾವವೆಂದರೆಭಗವಂತನು ಕೊಟ್ತಿಲ್ಲ ವೆಂದು ಅಭಾವವಿದೆಯೆಂದಲ್ಲ.ಭಗವಂತನು ಕೊಟ್ಟಿದ್ದರೂ ಅದು ಸರಿಯಾಗಿ ಹಂಚಿಕೆಯಾಗಿಲ್ಲ.ಎಲ್ಲೋ ಒಂದುಕಡೆ ಹೆಚ್ಚು, ಮತ್ತೊಂದುಕಡೆ ಕಮ್ಮಿ, ಹೀಗೆ ಅಭಾವ ಸೃಷ್ಟಿಯಾಗಿದೆ.ಪ್ರಪಂಚದಲ್ಲಿರುವ ಸಂಪತ್ತನ್ನು ಕ್ರೋಢೀಕರಿಸಿ,ಅದನ್ನು ಬೆಳಸಿ ಸಮಾಜದಲ್ಲಿ ಸಮಾನವಾಗಿ ಹಂಚಿಕೆಮಾಡಿ ಯಾರು ಇಂತಾ ಅಭಾವವನ್ನು ನಾಶಮಾಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೋ ಅವನು ವೈಶ್ಯನೆನಸಿಕೊಳ್ಳುತ್ತಾನೆ. ಪಶುಪಾಲನೆ,ಗೋಪಾಲನೆ, ಕೃಷಿ, ಇವೆಲ್ಲಾ ವೈಷ್ಯನ ಕೆಲಸ.ಸಮಾಜದಲ್ಲಿ ಅಭಾವದ ವಿರುದ್ಧ ಹೋರಾಡುವ ಯಾವನೇಆಗಲೀ ಅವನು ವೈಷ್ಯ ನೆನಸಿಕೊಳ್ಳುತ್ತಾನೆ.

ಶೂದ್ರ

ಸಮಾಜದಲ್ಲಿರುವ ನಾಲ್ಕನೇ ಮತ್ತು ಅತಿ ದುಷ್ಟಶಕ್ತಿ ಎಂದರೆ ಆಲಸ್ಯ. ಆಲಸ್ಯ, ಸೋಮಾರಿತನ, ನಿಶ್ಕ್ರಿಯತೆಯ ವಿರುದ್ಧ ಹೋರಾಡುವವನು ಶೂದ್ರನೆನಸಿಕೊಳ್ಳುತ್ತಾನೆ.ಲವಲವಿಕೆಯಿಂದ ಕೆಲಸವನ್ನು ಮಾಡುತ್ತಾ, ಎಲ್ಲರಲ್ಲೂ ಸ್ಫೂರ್ತಿಯನ್ನುಂಟುಮಾಡುತ್ತಾ,ಎಲ್ಲರೂ ಕೂಡ ಉದ್ಯಮಶೀಲರಾಗುವುದಕ್ಕೆ ಪ್ರೋತ್ಸಾಹವನ್ನು ಕೊಡುವವನು ಶೂದ್ರ.ಇಲ್ಲೂ ಕೂಡ ಅವನು ಯಾವ ಜಾತಿಯಲ್ಲಿ[ಈಗಿನ ರೂಢಿಯಂತೆ] ಹುಟ್ಟಿದನೆಂಬುದು ಲೆಕ್ಖಕ್ಕೆ ಬರಲಿಲ್ಲ.

ಹೀಗೆ ಸಮಾಜದಲ್ಲಿರುವ ನಾಲ್ಕು ದುಷ್ಟಶಕ್ತಿಗಳಾದ ಅಜ್ಞಾನ,ಅನ್ಯಾಯ, ಅಭಾವ ಮತ್ತು ಆಲಸ್ಯದ ವಿರುದ್ಧ ಹೋರಾಡುವ ಕ್ರಿಯೆಗಳಲ್ಲಿ ತಮ್ಮ ತಮ್ಮ ಗುಣಸ್ವಭಾವಗಳಿಗನುಗುಣವಾಗಿ ಜೋಡಿಸಿಕೊಳ್ಳುವವರನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ವಿಭಾಗಿಸಲಾಯ್ತು. ಇಲ್ಲಿ ಸಮಾಜದಈ ದುಷ್ಟಶಕ್ತಿಗಳ ವಿರುದ್ಧವಾಗಿ ಸಮಾನವಾಗಿ ಹೋರಾಡುತ್ತಿರುವ ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ, ಇವರಲ್ಲಿ ಮೇಲ್ಯಾರು? ಕೀಳ್ಯಾರು?

ಕಾಲಗತಿಯಲ್ಲಿ ಯಾರೋ ಅವಿವೇಕಿಗಳು ಈ ವರ್ಣವ್ಯವಸ್ಥೆಯಲ್ಲಿ ಮೇಲು ಕೀಳೆಂಬ ಭೇದ ಉಂಟುಮಾಡಿ ರೂಢಿಗೆ ಬಂದಿರುವುದು ಸುಳ್ಳಲ್ಲ. ಆದರೆ ಇದನ್ನು ವೇದವು ಒಪ್ಪುವುದಿಲ್ಲ.

ವೇದವು ಸ್ಪಷ್ಟವಾಗಿಹೇಳಿದೆ....

ಅಜ್ಯೇಷ್ಠಾಸೋ ಅಕನಿಷ್ಠಾಸ: ಏತೇ ಸಂಭ್ರಾತರೋ ವಾವೃಧು: ಸೌಭಗಾಯ| ಯುವಾ ಪಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿ: ಸುದಿನಾ ಮರುಧ್ಭ್ಯ:||

[ಋಕ್.೫.೬೦.೫]

ಅಜ್ಯೇಷ್ಠಾಸೋ ಅಕನಿಷ್ಠಾಸ:

ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ, ಈ ಜೀವನಕ್ರಮವನ್ನು ಪಾಲನೆಮಾಡುವವರಲ್ಲಿ ಯಾರೂ ದೊಡ್ದವರಲ್ಲ, ಯಾರೂ ಚಿಕ್ಕವರೂ ಅಲ್ಲ.ಯಾರೂ ಮೇಲೂ ಅಲ್ಲ. ಯಾರೂ ಕೀಳೂ ಅಲ್ಲ.

ಭ್ರಾತರೋ:

ಎಲ್ಲರೂ ಪರಸ್ಪರ ಸೋದರರು.

ಸೌಭಗಾಯ ಸಂ ವಾವೃಧು:

ನಿಮ್ಮೆಲ್ಲರ ಸೌಭಾಗ್ಯಕ್ಕಾಗಿ,ನಿಮ್ಮೆಲ್ಲರ ಏಳಿಗೆಗಾಗಿ ಒಟ್ಟಿಗೆ ನಡೆಯುವವರಾಗಿ.

ಪುರುಷಸೂಕ್ತದ ಈ ಒಂದು ಮಂತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡು ಅದರಂತೆ ನಡೆದದ್ದೇ ಆದರೆ ಸಮಾಜವು ಅಂದೇ ಸ್ವರ್ಗವಾಗುವುದಿಲ್ಲವೇ?

ನಾವೆಲ್ಲಾ ಹೇಗೆ ಸಹೋದರರು?

ಯುವಾ ಸ್ವಪಾ ರುದ್ರ: , ಏಷಾಂ ಪಿತಾ:

ಅಜರನೂ, ಆತ್ಮರಕ್ಷಕನೂ,ದುಷ್ಟರಿಗೆ ದಂಡನೀಡುವವನೂ ಆದ ಪ್ರಭುವು ಇವರೆಲ್ಲರ ತಂದೆ.ಆದ್ದರಿಂದಆಭಗವಂತನ ಮಕ್ಕಳಾದ ನಾವೆಲ್ಲಾ ಸೋದರರು.

ಸುದುಘಾ ಪೃಶ್ನಿ: ಸುದಿನಾ ಮರುಧ್ಭ್ಯ:

ಭೂತಾಯಿಯು ಈ ಮಾನವರಿಗೆಲ್ಲಾ ಉತ್ತಮಶಕ್ತಿಯನ್ನೆರೆಯುವವಳೂ, ಉತ್ತಮ ದಿನಗಳನ್ನು ತೋರಿಸುವವಳೂಆಗಿದ್ದಾಳೆ.

ನಮಗೆಲ್ಲಾ ಒಂದೇ ಭೂಮಿ. ನಮಗೆಲ್ಲಾ ಆಶ್ರಯವನ್ನು ಕೊಟ್ಟು, ಬದುಕಲು ದವಸಧಾನ್ಯಗಳನ್ನು ಕೊಟ್ಟು ಕಾಪಾಡುತ್ತಿರುವವಳು ಒಬ್ಬಳೇ ಭೂಮಾತೆ.ಆದ್ದರಿಂದ ನಾವೆಲ್ಲಾ ಒಬ್ಬನೇ ಭಗವಂತನ ಮಕ್ಕಳು.

ಸುಜಾತಾಸೋ ಜನುಷಾ ಪೃಶ್ನೀಮಾತರೋ ದಿವೋ ಮರ್ಯಾ:

[ಋಕ್.೫.೫೯.೬]

ಪೃಶ್ನೀಮಾತರ:

ಭೂತಾಯಿಯನ್ನೇ ತಾಯಿಯಾಗಿ ಹೊಂದಿದವರೂ

ದಿವ: ಮರ್ಯಾ:

ಜ್ಯೋತಿರ್ಮಯ ಪ್ರಭುವಿನ ಮಕ್ಕಳಾದ ಕಾರಣ

ಜನುಷಾ ಸುಜಾತಾಸ:

ಜನ್ಮದಿಂದ ಉತ್ತಮ ಕುಲದವರೇ ಆಗಿದ್ದಾರೆ.

ಅಥರ್ವವೇದವು ಹೇಳಿದೆ...

ಸಮಾನ ಮಂತ್ರ: ಸಮಿತಿ: ಸಮಾನೀ

ಸಮಾನ ವ್ರತಂ ಸಹ ಚಿತ್ತ ಮೇಷಾಂ|

ಸಮಾನೇನ ವೋ ಹವಿಷಾ ಜುಹೋಮಿ

ಸಮಾನಂ ಚೇತೋ ಅಭಿಸಂವಿಶಧ್ವಮ್||

[ಅಥರ್ವ ವೇದ ೬.೬೪.೨]

ಮಂತ್ರ:ಸಮಾನ:

ಎಲ್ಲರ ಮಂತ್ರವೂ ಸಮನಾಗಿರಲಿ

ಸಮಿತಿ: ಸಮಾನೀ

ಸಮಿತಿ ಸಮಾನವಾಗಿರಲಿ

ವ್ರತಂಸಮಾನಮ್

ವ್ರತವೂ ಸಮಾನವಾಗಿರಲಿ

ಏಷಾ ಚಿತ್ತಂ ಸಹ

ಇವರೆಲ್ಲರ ಚಿತ್ತವೂ ಒಂದೇ ದಿಕ್ಕಿನಲ್ಲಿ ಹರಿಯಲಿ

ವ: ಸಮಾನೇನ ಹವಿಷಾ ಜುಹೋಮಿ

ನಿಮ್ಮೆಲ್ಲರಿಗೂ ಸಮಾನವಾದ ಖಾದ್ಯಪೇಯಗಳನ್ನೇ ದಾನ ಮಾಡುತ್ತೇನೆ

ಸಮಾನಂ ಚೇತ:

ಸಮಾನವಾದ ಚೈತನ್ಯದಲ್ಲಿಯೇ

ಅಭಿಸಂವಿಶಧ್ವಮ್

ಎಲ್ಲೆಡೆಯಿಂದಲೂ ಪ್ರವೇಶಿಸಿರಿ

ಭಗವಂತನು ಇಷ್ಟು ಸ್ಪಷ್ಟವಾಗಿ ಸಮಾನತೆಯ ಸಂದೇಶವನ್ನು ಸಾರುತ್ತಿರುವಾಗ ಮಾನವರಲ್ಲಿ ಮೇಲ್ಯಾರು? ಕೀಳ್ಯಾರು? ಎಲ್ಲರೂ ಸೋದರರೇ ಅಲ್ಲವೇ?

[ಆಧಾರ: ವೇದಾಧ್ಯಾಯೀ ಸುಧಾಕರ ಶರ್ಮರ ಉಪನ್ಯಾಸ ಮತ್ತು ಪಂ.ಸುಧಾಕರ ಚತುರ್ವೇದೀ ಇವರ ಗ್ರಂಥ " ವೇದೋಕ್ತ ಜೀವನ ಪಥ"]

ಚಾತುರ್ವರ್ಣ

ಋಗ್ವೇದ ಸಂಹಿತೆಯ ೧೦ನೇಮಂಡಲದ ೮ನೇ ಅಷ್ಟಕದ ೯೦ನೇ ಸೂಕ್ತದ ೧೨ನೇ ಮಂತ್ರ...

ಬ್ರಾಹ್ಮಣೋಸ್ಯ ಮುಖಮಾಸೀತ್ |ಬಾಹೂ ರಾಜನ್ಯಕೃತ:| ಊರೂ ತದಸ್ಯಯದ್ವೈಶ್ಯ:| ಪದ್ಭ್ಯಾಂ ಶೂದ್ರೋ ಅಜಾಯತ|

ವೇದದಲ್ಲಿ ಪುಸುಷಸೂಕ್ತದ ಈ ಮಂತ್ರಭಾಗವು ನಮಗೆಲ್ಲಾ ಪರಿಚಿತ. ಕಾಲಕ್ರಮದಲ್ಲಿ ಬಹಳಷ್ಟು ಅಪಾರ್ಥಕ್ಕೆ ಕಾರಣವಾಗಿರುವುದೂ ಇದೇ ಭಾಗ.

ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ-ಇವು ಹುಟ್ಟಿನಿಂದ ಬರುವಂತಹದ್ದಲ್ಲ.ರೂಢಿಯಲ್ಲಿ ಜಾತಿಎಂದು ಗುರುತಿಸಿಕೊಂಡಿರುವ ಈ ವ್ಯವಸ್ಥೆ ಜಾತಿಯಲ್ಲ. ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ-ಎಂಬುದು ವರ್ಣವ್ಯವಸ್ಥೆ. ಜಾತಿಯೇ ಬೇರೆ.ವರ್ಣವೇ ಬೇರೆ.ಅನೇಕ ವಿದ್ವಾಂಸರುಗಳೂ ಕೂಡ ಈ ಎರಡು ಪದಗಳ ಅರ್ಥವನ್ನು ಸರಿಯಾಗಿ ಮಾಡದಿರುವುದರಿಂದ ನಾವೆಲ್ಲಾ ಗೊಂದಲದಲ್ಲಿ ಸಿಲುಕಿದ್ದೇವೆ. ಜಾತಿ ಎಂದರೆ ಹುಟ್ಟಿನಿಂದ ಬರುವಂತಹದ್ದು ಎಂದು ಅರ್ಥ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ-ಎಂಬುದು ಹುಟ್ಟಿನಿಂದ ಬರುವಂತದ್ದಲ್ಲ. ಇದನ್ನು ವರ್ಣ ಎಂದು ಹೇಳುವರು. ವರ್ಣ ವೆಂದರೇನು? ಅದರ ಮೂಲಧಾತುವಿನಿಂದ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ವರ್ಣದ ಮೂಲಧಾತು ವೃ-ವರಣೆ ಅಂದರೆ ಆರಿಸುವಿಕೆ.ಯಾವುದನ್ನು ಆರಿಸಿಕೊಳ್ಳುತ್ತೇವೋ ಅದು ವರ್ಣ.ಆರಿಸಿಕೊಳ್ಳಲು ಇಲ್ಲಿ ಅವಕಾಶವಿದೆ ,ಎಂಬುದು ಗಮನಾರ್ಹ.ನಮಗೆ ಇಲ್ಲಿ ಆರಿಸಿಕೊಳ್ಳುವುದಕ್ಕೆ ಸ್ವಾತಂತ್ರ್ಯವಿದೆ.ಆರಿಸಿಕೊಂಡು ಸಾಧನೆಮಾಡಿ ತನ್ನದಾಗಿಸಿಕೊಳ್ಳುವುದು ವರ್ಣ. ಹುಟ್ಟಿನಿಂದ ಬರುವುದು ಜಾತಿ. ಇಲ್ಲಿ ಆರಿಸಿಕೊಳ್ಳಲು ಸಾಧ್ಯವಿಲ್ಲ.ಒಂದು ಸಣ್ಣ ಉಧಾಹರಣೆ ನೋಡೋಣ. ಆಗತಾನೇ ಹುಟ್ಟಿದ ಹತ್ತು ಮಕ್ಕಳನ್ನು [ಅದು ಈಗ ನಾವು ಹೇಳುವಂತೆ ಯಾವುದೇ ಜಾತಿಗೆ ಸೇರಿರಲಿ]ಒಟ್ಟಿಗೆ ಮಲಗಿಸಿದಾಗ ಇದು ಬ್ರಾಹ್ಮಣ, ಇದು ಲಿಂಗಾಯಿತ, ಇದು ಮುಸ್ಲಿಮ್, ಇದು ಕ್ರೈಸ್ತ ಮಗುವೆಂದು ವಿಭಾಗಿಸಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಅದರೆ ಅದೇ ಮಕ್ಕಳೊಡನೆ ಒಂದು ನಾಯಿಮರಿ, ಒಂದು ಬೆಕ್ಕಿನಮರಿಯನ್ನು ಮಲಗಿಸಿದರೆ,ಆಗ ಇದು ಮನುಷ್ಯ, ಇದು ನಾಯಿ, ಇದು ಬೆಕ್ಕು ಎಂದು ವಿಭಾಗಿಸಲು ಸಾಧ್ಯ. ಅಲ್ಲವೇ? ಆದ್ದರಿಂದ ಹುಟ್ಟಿನಿಂದ ಬಂದಿದ್ದು ಮನುಷ್ಯ ಜಾತಿ ಮಾತ್ರ ಎಂದಾಯ್ತಲ್ಲವೇ? ಜಾತಿ ಎಂದರೇನು? "ಸಮಾನ ಪ್ರಸವಾತ್ಮಿಕಾ ಜಾತಿ:" ಅಂದರೆ ತನ್ನಂತದೇ ಸಂತಾನಕ್ಕೆ ಜನ್ಮನೀಡುವುದು ಜಾತಿ.ಕುರಿಯೊಂದು ಕುರಿಮರಿಗೆ, ಆಡು ಆಡಿಗೆ, ಕೋತಿಯು ಕೋತಿಗೆ ಮತ್ತು ಮನುಷ್ಯ ಮನುಶ್ಯನಿಗೆ ಜನ್ಮ ನೀಡುವುದರಿಂದ ಇವುಗಳನ್ನು ಕುರಿ,ಆಡು, ಕೋತಿ ಮತ್ತು ಮನುಷ್ಯ ಜಾತಿ ಎಂದು ಬೇರೆ ಬೇರೆ ಹೇಳಬಹುದು. ಹುಟ್ಟಿನಿಂದ ಬರುವ, ತನ್ನದೇರೀತಿಯ ಮರಿಗೆ ಸಂತಾನ ನೀಡುವ , ಸಾಯುವ ವರೆಗೂ ಹಾಗೆಯೇ ಇರುವುದಕ್ಕೆ ಜಾತಿ ಎಂದು ಹೇಳುವರು. ಕುರಿಯೊಂದು ಕುರಿಮರಿಗೆ ಮಾತ್ರವೇ ಜನ್ಮ ನೀಡಬಲ್ಲದು ಮತ್ತು ಸಾಯುವ ವರೆಗೂ ಅದು ಕುರಿಯೇ ಆಗಿರುತ್ತದೆ. ಅದರ ಜಾತಿ ಬದಲಾವಣೆ ಆಗುವುದಿಲ್ಲ. ಜಾತಿ ಪದದ ಅರ್ಥ ಇರುವುದು ಹೀಗೆ. ಜನ್ಮನ ಜಾತಿ: ಅಂದರೆ ಹುಟ್ಟಿನಿಂದ ಜಾತಿ.ನಾವು ಜಾತಿ ಎಂದು ವಿಚಾರ ಮಾಡುವುದೇ ಆದರೆ ಹುಟ್ಟಿನಿಂದ ಬಂದದ್ದು ಅದು ಮನುಷ್ಯ ಜಾತಿ ಮಾತ್ರ.ಇದು ಸಹಜವಾಗಿ ಪ್ರಾಕೃತವಾಗಿ ಉಂಟಾಗಿರುವ ವಿಭಾಗ. ವರ್ಣ ವಾದರೋ ನಮ್ಮ ಗುಣಕರ್ಮಕ್ಕನುಸಾರವಾಗಿ, ನಮ್ಮ ಆಸಕ್ತಿ, ಸಾಮರ್ಥ್ಯಕ್ಕನುಗುಣವಾಗಿ ನಾವು ಆರಿಸಿಕೊಂಡಿದ್ದು.ಆದರೆ ತಪ್ಪು ಹೇಗಾಗಿದೆ ಎಂದರೆ ಬ್ರಾಹ್ಮಣನ ಮಗನೂ ಬ್ರಾಹ್ಮಣ,ಶೂದ್ರನ ಮಗ ಶೂದ್ರ, ಹೀಗೆಲ್ಲಾ ತಪ್ಪು ರೂಢಿಯಲ್ಲಿ ಬಂದುಬಿಟ್ಟಿದೆ. ಇದು ಎಷ್ಟು ಮೂರ್ಖತನದ ಪರಮಾವಧಿ ಎಂದರೆ ವೈದ್ಯನಮಗ ವೈದ್ಯ, ಇಂಜಿನಿಯರ್ ಮಗ ಇಂಜಿನಿಯರ್ ಎಂದರೆ ಎಷ್ಟು ಹೊಂದುವುದಿಲ್ಲವೋ ಇದೂ ಹಾಗೆಯೇ ಹೊಂದದ ವಿಚಾರ.ಅಪ್ಪ ಇಂಜಿನಿಯರ್ ಆದ ಮಾತ್ರಕ್ಕೆ ಮಗ ಇಂಜಿನಿಯರ್ ಆಗಲು ಸಾಧ್ಯವಿಲ್ಲ. ಇದು ಅವನ ಆರಿಸಿಕೊಳ್ಳುವಿಕೆ, ಶ್ರಮ, ಸಾಧನೆಯಿಂದ ಮಾತ್ರ ಬರುವಂತಹದ್ದು, ಆರಿಸಿಕೊಂಡಿದ್ದು ವರ್ಣ.

ಜೀವನ ಕ್ರಮದ ವೆತ್ಯಾಸವನ್ನು ಒಂದು ಸೂತ್ರರೂಪದಲ್ಲಿ ಹೀಗೆ ಹೇಳಬಹುದು.

ಸಮಾಜವನ್ನು ನಾಶಮಾಡುವ ನಾಲ್ಕು ದುಷ್ಟಶಕ್ತಿಗಳಿವೆ. ಯಾವ ಸಮಾಜದಲ್ಲಿಈ ನಾಲ್ಕು ದುಷ್ಟಶಕ್ತಿಗಳು ನಾಶವಾಗುತ್ತದೋ ಆ ಸಮಾಜವು ಪ್ರಗತಿಯನ್ನು ಹೊಂದುತ್ತದೆ.ಆ ದುಷ್ಟಶಕ್ತಿಗಳೆಂದರೆ...

ಒಂದು ಅಜ್ಞಾನ,ಎರಡನೆಯದು ಅನ್ಯಾಯ,ಮೂರನೆಯದು ಅಭಾವ ಮತ್ತು ನಾಲ್ಕನೆಯದು ಆಲಸ್ಯ. ಈ ನಾಲ್ಕೂ ದುಷ್ಟಶಕ್ತಿಗಳಿದ್ದಾಗ ಯಾವ ಸಮಾಜವು ಪ್ರಗತಿಹೊಂದಲು ಸಾಧ್ಯ?

ಯಾವಾಗ ಅಜ್ಞಾನವೆಂಬುದು ಹೋಗುತ್ತದೆ,ಆಗ ಜ್ಞಾನವು ಲಭಿಸುತ್ತದೆ,ಈ ಅಜ್ಞಾನದವಿರುದ್ಧ ಹೋರಾಡಿದವನು ಬ್ರಾಹ್ಮಣನೆನಿಸಿದನು. ಇಲ್ಲಿ ಮತ್ತೆ ಜಾತಿ ಗಣನೆಗೆ ಬಾರದು.ಅವನ ಸ್ವಂತ ಯೋಗ್ಯತೆ, ಸಾಧನೆಯ ಮೇಲೆ ಅವನು ಬ್ರಾಹ್ಮಣನಾಗುತ್ತಾನೆ, ಅವನು ಯಾರ ಹೊಟ್ಟೆಯಲ್ಲಿ ಹುಟ್ಟಿದನೆಂಬುದು ಇಲ್ಲಿ ನಗಣ್ಯ. ಅವನು ಶ್ರಮ ವಹಿಸಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾನಾದ್ದರಿಂದ ಅವನು ಇಂಜಿನಿಯರ್, ಅಥವಾ ವೈದ್ಯಕೀಯ ಓದಿದ್ದರೆ ಡಾಕ್ಟರ್ ಅಥವಾ ಮತ್ಯಾರೋ.ಅವನು ಯಾರ ಮಗನೆಂಬುದು ಇಲ್ಲಿ ಗಣನೆಗೆ ಬರುವುದಿಲ್ಲ. ಅಜ್ಞಾನದ ವಿರುದ್ಧವಾಗಿ ಇವನು ಹೋರಾಡುತ್ತಿದ್ದಾನಾದ್ದರಿಂದ ಇವನು ಬ್ರಾಹ್ಮಣ. ಇವನು ಯಾರ ಹೊಟ್ಟೆಯಲ್ಲಿ ಹುಟ್ಟಿದ್ದರೇನು? ಅವನ ಹೆಸರು ಮಕಂದರ್ ಆದರೇನು? ಪೀರ್ಆದರೇನು? ಅವನು ಅವನ ಗುಣಕರ್ಮ ಸ್ವಭಾವದಿಂದ ಬ್ರಾಹ್ಮಣತ್ವ ಗಳಿಸಿದ್ದಾನಾದ್ದರಿಂದ ಅವನು ಬ್ರಾಹ್ಮಣ.ಅವರ ಅಪ್ಪ ಯಾರೂ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿಲ್ಲ.ಅವನ ಸಾಧನೆ ಏನು, ಅವನು ಸಮಾಜದ ಅಜ್ಞಾನ ಹೋಗಲಾಡಿಸಲು ಹೋರಾಡುತ್ತಿದ್ದರೆ, ಅವನು ಬ್ರಾಹ್ಮಣ.

--------------------------------------------------------

ಅನ್ಯಾಯ, ಅಭಾವ, ಆಲಸ್ಯ ಗಳ ವಿರುದ್ಧ ಹೋರಾಡುವವರ ಬಗ್ಗೆ ಮುಂದಿನ ಭಾಗದಲ್ಲಿ ಬರೆಯುವೆ.

Monday, July 13, 2009

ಮನದಾಳದ ಮಾತು

ಒಂದರೆಗಳಿಗೆ ನಮ್ಮ ರಾಜಕಾರಣಿಗಳು ತಾವು ರಾಜಕಾರಣಿಗಳಲ್ಲಾ,ಎಂದುಭಾವಿಸಲಿ; ಸಾಹಿತಿಗಳು ತಮ್ಮ ಪೂರ್ವಾಗ್ರಹ ಮರೆತು ಚಿಂತಿಸಲಿ, ಸರ್ಕಾರಿ ನೌಕರರು/ಅಧಿಕಾರಿಗಳು ಯಾರಿಗೂ ಅಂಜದೆ ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಲಿ, ನ್ಯಾಯವಾದಿಗಳು/ಪೋಲೀಸರು ತಮ್ಮ ಆತ್ಮಸಾಕ್ಷಿಯನ್ನು ನೆನಪು ಮಾಡಿಕೊಳ್ಳಲಿ.................. ಈಗ ತಾವು ರಾಜಕಾರಣಿ, ಸಾಹಿತಿ,ಇತ್ಯಾದಿ ಎಂಬುದನ್ನು ಮರೆತು ತಮ್ಮ ಕುಟುಂಬದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ.... ೧] ತಮ್ಮ ಕುಟುಂಬವು ಪರಿಪೂರ್ಣ ಆರೋಗ್ಯವಾಗಿ ನೆಮ್ಮದಿಯಿಂದ ಇದೆಯೇ? ೨] ಮಕ್ಕಳೊಡನೆ ಸಂತಸವಾಗಿದ್ದೇವೆಯೇ? ೩] ತಮ್ಮ ಮಕ್ಕಳು ನಿಜವಾಗಿಯೂ ಋಜುಮಾರ್ಗದಲ್ಲಿ ಸಾಗುತ್ತಿದ್ದಾರೆಯೇ? ನಮ್ಮ ಆತ್ಮಸಾಕ್ಷಿ ಏನು ನುಡಿದೀತು? ಎಲ್ಲವೂ ಉತ್ತಮ ವಾಗಿದೆ, ಎಂಬುವುದಾದರೆ ಈ ಬರಹವನ್ನು ಮುಂದೆ ಓದುವ ಅಗತ್ಯವಿಲ್ಲ. ಇಲ್ಲವೆಂದಾದರೆ........ ೧] ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳಲ್ಲಿ ನಮ್ಮ ಸ್ಥಿತಿ ಹೀಗೇಕೆ? ೨] ನಮ್ಮ ಮೂಲ ಸಂಸ್ಕೃತಿ-ಪರಂಪರೆಗಳನ್ನು ಮರೆಯುತ್ತಾ ಬಂದ ಪರಿಣಾಮವೇ? ೩]ಆಧುನಿಕ ಶಿಕ್ಷಣದ ಅವಾಂತರವೇ? ೪] ವೈಜ್ಞಾನಿಕ ಅನ್ವೇಷಣೆಗಳ ಅತಿ ಅನುಭೋಗದ ಕಾಣಿಕೆಯೇ? ಹೌದೆಂದಾದರೆ ಪರಿಹಾರವೇನು? ಎಲ್ಲರೂ ಚಿಂತನ-ಮಂಥನ ನಡೆಸೋಣ. ಎಲ್ಲರ ಮನದಾಳದ ಮಾತುಗಳಿಗೆ ಅಕ್ಷರವನ್ನು ಕೊಡಿ.ಸ್ನೇಹ ಮಿಲನದಲ್ಲಿ ನಾವುಗಳು ಸೇರಿದಾಗ ಈ ಚಿಂತನೆಗಾಗಿ ಒಂದು ಗಂಟೆ ಅವಧಿಯನ್ನಾದರೂ ಮೀಸಲಿರಿಸಿ, ಬೆಂಗಳೂರಿನ ಯಾರಾದರೂ ಚಿಂತಕರನ್ನು ಕರೆಸಿ ಅವರು ನಮ್ಮೆಲ್ಲರ ಮನದಾಳದ ಮಾತುಗಳನ್ನು ಕ್ರೂಢೀಕರಿಸಿದರೆ ಒಂದು ಸೂತ್ರ ಹೊರಬಂದೀತು. ನೆನಪಿರಲಿ: ಒಂದರೆಗಳಿಗೆ ನಮ್ಮ ಪೂರ್ವಾಗ್ರಹ ಬದಿಗಿರಲಿ. ನಾವು ಮಕ್ಕಳಾಗೋಣ.ಮೆಚ್ಚುಗೆಗಾಗಿಯೂ ಬರೆಯುವುದು ಬೇಡ, ಚುಚ್ಚುವುದಂತೂ ಬೇಡವೇ ಬೇಡ. ನಮ್ಮ ಮಾತು ಬಿಚ್ಚುಮನಸ್ಸಿನಿಂದ ಮಕ್ಕಳ ತೊದಲು ಮಾತಿನಂತಿದ್ದರೂ ಚೆನ್ನ. [ಈ ವಿಚಾರದಲ್ಲಿ ಚಿಂತನ- ಮಂಥನ ನಡೆದರೆ ಒಳ್ಳೆಯದು ಎಂಬುದು ನನ್ನ ಅಭಿಮತವಷ್ಟೆ. ಆಗ್ರಹವಲ್ಲ] ಮನವಿ:- ಈ ಚುಟುಕು ಬರಹ ಚೆನ್ನಾಗಿದೆ,ಇತ್ಯಾದಿ ಮಾತುಗಳ ಬದಲು " ನಮ್ಮ ಸಮಾಜವು ಆರೋಗ್ಯಪೂರ್ಣ ವಾಗಬೇಕೆಂದರೆ ದಾರಿ ಯಾವುದು? ನಿಮ್ಮ ಮಾತಿನಲ್ಲಿ ತಿಳಿಸಿ

ಯಾವುದೋ ಹಳೆಯಪುಸ್ತಕ ಓದುತ್ತಿದ್ದೆ. ಅದರಲ್ಲಿದ್ದ ಒಂದು ಕಾಗದ ನನ್ನನ್ನು ಆಕರ್ಷಿಸಿತು.೧೯೪೫ ರಲ್ಲಿ ನಮ್ಮ ಸೋದರಮಾವ ನಮ್ಮ ತಾತನಿಗೆ ಬರೆದಿರುವ ಪತ್ರವದು. ಆ ಮೋಡಿ ಅಕ್ಷರವನ್ನು ಸಂಪದ ಓದುಗರಿಗೆ ತೋರಿಸ ಬೇಕೆನಿಸಿತು. ಫೋಟೋ ತೆಗೆದು ಅಪ್ ಲೋಡ್ ಮಾಡಿರುವೆ. ನನಗೆ ಅದರಲ್ಲಿ ಇನ್ನೂ ಹೆಚ್ಚು ಆಕರ್ಷಿಸಿದ್ದು-" ಇದು ನಾಜೂಕಿನ ಕಾಲ, ಮದುವೆಯನ್ನು ಒಂದೇ ದಿನ ಮಾಡಿದರೆ ಸಾಕು, ಹೊಳೇನರಸೀಪುರದಲ್ಲಾದರೆ ಖರ್ಚು ಜಾಸ್ತಿ, ಮಾವಿನಕೆರೆಯಲ್ಲಿ ಮಾಡೋಣ. ಬೆಳಿಗ್ಗೆಯೇ ವರಪೂಜೆ ಮಾಡಿಕೊಂಡು ಅಂದೇ ಮದುವೆ ಮಾಡಿ ಮುಗಿಸೋಣ" ಇದು ಕಾಗದದಲ್ಲಿ ನಾನು ಓದಿದ್ದು. ಚಿತ್ರವನ್ನು ದೊಡ್ದದು ಮಾಡಿಕೊಂಡು ಪೂರ್ಣ ಓದಬಹುದು.ಇಂದಿನ ಮದುವೆಯ ಸಂಬ್ರಮ, ಅದರಖರ್ಚು, ಎಲ್ಲವನ್ನೂ ನೋಡಿದರೆ, ಅಂದಿನ ಸ್ಥಿತಿ ಹೇಗಿತ್ತು! ನೋಡಿ. ನಮ್ಮ ಕಾಲದಲ್ಲಿ ಮದುವೆ ಎಂದರೆ ಒಂದ ವಾರ ನಡೆಯುವ ಕಾರ್ಯಕ್ರಮ ಎನ್ನುವವರೂ ಇದ್ದಾರೆ. ಆದರೆ ಈ ಕಾಗದ ಅಂದಿನ ಹಣಕಾಸಿನ ಮುಗ್ಗಟ್ಟಿಗೆ ಹಿಡಿದ ಕನ್ನಡಿಯಲ್ಲವೇ?