Monday, July 13, 2009

ವೇದವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಬಗೆ ಹೇಗೆ?

೧೯.೯.೨೦೦೩ ರಂದು ಬೇಲೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ವೇದಾಧ್ಯಾಯೀ ಸುಧಾಕರ ಶರ್ಮರು ವೇದವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಬಗೆ ಹೇಗೆ? ಎಂಬ ವಿಚಾರವಾಗಿ ಬಹು ಸರಳ ಮತ್ತು ಸ್ಪಷ್ಟ ಮಾತುಗಳಲ್ಲಿ ಉಪನ್ಯಾಸವನ್ನು ಮಾಡಿದ್ದಾರೆ. ಅಂದು ಮಾಡಿದ ಉಪನ್ಯಾಸಕ್ಕೆ ಅಕ್ಷರಕೊಡುವ ಪ್ರಯತ್ನ ಮಾಡುತ್ತಿರುವೆ. ಒಂದು ವೇಳೆ ಬರೆಯುವಾಗ ಅಕ್ಷರ ತಪ್ಪಾಗಿ ಅರ್ಥ ತಪ್ಪಾದರೆ ಅದು ನನ್ನ ತಪ್ಪು. ಆದರೆ ಅವರ ಮಾತುಗಳನ್ನು ಒಪ್ಪದಿದ್ದರೆ ದಯಮಾಡಿ ಸಂಪದಿಗರು ಪ್ರತಿಕ್ರಿಯಿಸಿದರೆ ಶ್ರೀಯುತರ ಗಮನಕ್ಕೆ ತಂದು ಅವರಿಂದಲೇ ಸಮಾಧಾನದ ಉತ್ತರ ಕೊಡಿಸುವೆ. ಇನ್ನು ಮುಂದೆ ಅವರದೇ ಮಾತು ಕೇಳಿ....... ನಾವು ಯಾವುದೇ ಪದದ ಅರ್ಥ ಗೊತ್ತಿಲ್ಲವೆಂದಾಗ ನಿಘಂಟಿನ ಮೊರೆಹೋಗುವುದು ಸಹಜ. ಸಂಸ್ಕೃತ ಭಾಷೆಗೂ ನಿಘಂಟಿದೆ. ಆದರೆ ಅದರಲ್ಲಿ ಎರಡುರೀತಿಯ ನಿಘಂಟಿದೆ. ಈ ಸೂಕ್ಷ್ಮ ನಮಗೆ ತಿಳಿದರೆ ವೇದದ ಅರ್ಥ ತಿಳಿಯುವುದು ಸುಲಭವಾಗುತ್ತೆ. ಆಪ್ಟೆ ಅಥವಾ ಬೇರಾರೋ ಬರೆದಿರುವ ಒಂದು ರೀತಿಯ ಸಂಸ್ಕೃತ ನಿಘಂಟಿನ ಪರಿಚಯ ಎಲ್ಲರಿಗಿದೆ. ಆದರೆ ವೇದಗಳಲ್ಲಿ ಉಪಯೋಗಿಸಿರುವ ಭಾಷೆ ಸಂಸ್ಕೃತ ಅಲ್ಲ. ವೇದ ಇರುವುದು ವೇದದ್ದೇ ಭಾಷೆಯಲ್ಲಿ.ಇದರಿಂದ ಸಂಸ್ಕೃತ ಹುಟ್ಟಿದೆಯೇ ಹೊರತೂ ವೇದ ವಿರುವುದು ವೇದಭಾಷೆಯಲ್ಲಿ, ಸಂಸ್ಕೃತದಿಂದಲ್ಲ. ಈ ರಹಸ್ಯ ತಿಳಿಯದಾಗ ಆಭಾಸವಾಗುತ್ತೆ. ವೇದದ ಅರ್ಥ ಗೊತ್ತಾಗದಿದ್ದಾಗ ನಾವು ಮಾಡುವುದಾದರೂ ಏನು, ಯಾವುದಾದರೂ ಸಂಸ್ಕೃತ ನಿಘಂಟನ್ನು ನೋಡುವೆವು. ಆಗ ದಾರಿ ತಪ್ಪುತ್ತೇವೆ. ವೇದಗಳು ವೇದಭಾಷೆಯಲ್ಲಿರುವುದರಿಂದ ವೇದದ ನಿಘಂಟನ್ನೇ ನೋಡಬೇಕೇ ಹೊರತು ಸಂಸ್ಕೃತ ನಿಘಂಟನ್ನಲ್ಲ. ವೇದದ ನಿಘಂಟನ್ನು ಯಾಸ್ಕರಾಚಾರ್ಯರು ನಿರೂಪಿಸಿದ್ದಾರೆ. ಇದನ್ನು ನಿರುಕ್ತ ಎಂದು ಕರೆಯುತ್ತೇವೆ. ಉಧಾಹರಣೆಗೆ "ಅಧ್ವರ " ಎಂಬ ಪದಕ್ಕೆ ನಿರುಕ್ತದಲ್ಲಿ ಯಾಸ್ಕರಾಚಾರ್ಯರು ಹೇಳುವರು" ಧ್ವರ ಇತಿ ಹಿಂಸಾ ಕರ್ಮ".ಧ್ವರ ಎಂದರೆ ಹಿಂಸೆ ಎಂದಾಗ ಅಧ್ವರ ಎಂದರೆ ಅಹಿಂಸೆ." ಅಗ್ನೇಯೆ ಯಜ್ಞಮಧ್ವರಂ" ಯಜ್ಞಕ್ಕೆ ಅಧ್ವರ ವೆಂತಲೂ ಕರೆಯುವುದರಿಂದ ಯಜ್ಞ ಎಂದರೆ ಅಹಿಂಸೆ ಎಂದಾಯ್ತು. ಆದ್ದರಿಂದ ಯಜ್ಞಯಾಗಾದಿಗಳಲ್ಲಿ ಹಿಂಸೆಗೆ ಅವಕಾಶವೇ ಇಲ್ಲ. ಆದರೆ ಅಶ್ವಮೇಧ ಯಾಗ ದಲ್ಲಿ ಕುದುರೆಯನ್ನು ಬಲಿಕೊಡುತ್ತಿದ್ದರಂತಲ್ಲಾ ? ಎಂದು ಕೇಳುವವರಿದ್ದಾರೆ. ಆದರೆ ಅಶ್ವಮೇಧಯಾಗದ ಸರಿಯಾದ ಅರ್ಥ ಮಾಡಿಕೊಳ್ಳದ ದುಶ್ಪರಿಣಾಮ ಇದು. ಸಂಸ್ಕೃತ ನಿಘಂಟಿನಲ್ಲಿ ಅರ್ಥ ಹುಡುಕಿದಾಗ ಆಭಾಸವಾಗುವ ಅವಕಾಶವಿದೆ. ಅಶ್ವ ಎಂದರೆ ಕುದುರೆ, ಮೇಧ ಎಂದರೆ ಬಲಿಕೊಡು ಎಂದಾಗಿಬಿಡುತ್ತದೆ.[ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ಸಂಕ್ಷಿಪ್ತ ಕನ್ನಡ ನಿಘಂಟಿನ ಪುಟ ೭೯ ರಲ್ಲಿ ಅಶ್ವಮೇಧ= ಕುದುರೆಯನ್ನು ಬಲಿಕೊಡುವ ಒಂದು ಯಾಗವೆಂದು ಬರೆದಿದೆ] ವೇದದ ಪದಗಳ ಅರ್ಥವನ್ನು ಸಂಸ್ಕೃತ ನಿಘಂಟಿನಲ್ಲಿ ಹುಡುಕಿದರೆ ಇಂತಹ ಆಭಾಸ ವಾಗುತ್ತದೆ. ಯಜ್ಞ ಎಂದರೆ ಅಹಿಂಸೆ ಎಂದು ವೇದದಲ್ಲಿಯೇ ಹೇಳಿರುವಾಗ ಅಶ್ವಮೇಧ= ಕುದುರೆಯನ್ನು ಬಲಿಕೊಡುವ ಒಂದು ಯಾಗವೆಂದು ಅರ್ಥ ಮಾಡಿಕೊಂಡರೆ ವೇದಕ್ಕೆ ನಾವು ಅಪಚಾರ ಮಾಡಿದಂತಲ್ಲವೇ? ನಾವೀಗ ಯಾಸ್ಕರಾಚಾರ್ಯರ ನಿರುಕ್ತದಲ್ಲಿ ಇದರ ಅರ್ಥ ಹುಡುಕಿದಾಗ ನಮಗೆ ಸರಿಯಾದ ಅರ್ಥ ಸಿಗುತ್ತೆ. ಒಂದೊಂದೂ ಪದದ ನಿರ್ಮಾಣ ಹೇಗಾಯ್ತು ಎಂದು ಯಾಸ್ಕರಾಚಾರ್ಯರು ವಿವರಿಸುತ್ತಾರೆ. ಅಶ್ವ ಎಂಬ ಶಬ್ಧ ಯಾವ ಮೂಲದಿಂದ ಬಂತು? ಎಂದಾಗ ಅಶ್ ಎಂಬ ಮೂಲ ಧಾತುವಿನಿಂದ ಅಶ್ವ ಪದ ಮೂಡಿಬಂದಿದೆ. ಅಶ್ ಎಂದರೆ ಭಕ್ಷಣೆ [ತಿನ್ನು], ಯಾವುದು ತಿನ್ನುತ್ತದೋ ಅದಕ್ಕೆ ಅಶ್ವ ವೆಂದು ಹೆಸರು. ಇದನ್ನು ನಾವು ಶುದ್ಧ ಯೌಗಿಗ ಅರ್ಥದಲ್ಲಿ ತೆಗೆದುಕೊಂಡಾಗ ನಮಗೆ ಸರಿಯಾಗಿ ಅರ್ಥವಾಗುತ್ತದೆ. ಮೂರು ರೀತಿಯಲ್ಲಿ ಅರ್ಥವನ್ನು ಹುಡುಕಬೇಕಾಗುತ್ತದೆ.೧]ರೂಢಿಯಲ್ಲಿರುವ ರೂಢಾರ್ಥ ೨] ಧಾತುವಿನಿಂದ ನಿರ್ಮಾಣವಾದ ಯೌಗಿಕ ಅರ್ಥ ೩]ಇವೆರಡರ ಬೆರೆಕೆಯಿಂದ ಕಂಡುಕೊಂಡದ್ದು ಯೋಗರೂಢಾರ್ಥ. ಯೋಗರೂಢ ಎಂದರೆ ಧಾತುವಿನಿಂದ ಬಂದ ಅರ್ಥ ದೊಡನೆ ರೂಢಿಯಿಂದ ಬಂದ ಅರ್ಥದ ಮಿತಿಯನ್ನು ಹಾಕಿಕೊಂಡು ರೂಢಾರ್ಥವೆನಿಸುತ್ತದೆ. ಆದರೆ ಕೇವಲ ಯೌಗಿಕ ಶಬ್ಧಕ್ಕೆ ಈ ಮಿತಿಯಿಲ್ಲ. ಒಂದು ಉಧಾಹರಣೆ ನೋಡೋಣ."ಪಂಕಜ" ಎಂಬ ಪದವನ್ನು ಯೌಗಿಕ ಅರ್ಥದಲ್ಲಿ ತೆಗೆದುಕೊಂಡಾಗ ಪಂಕ ಎಂದರೆ ಕೆಸರು ಜ ಎಂದರೆ ಹುಟ್ಟಿದ್ದು ಎಂದು ಅರ್ಥೈಸಿ ಪಂಕಜ ಎಂದರೆ ಕಮಲ ಎನ್ನುತ್ತೇವೆ. ಆದರೆ ಕೆಸರಿನಲ್ಲಿ ಹುಟ್ಟುವ ಸೊಳ್ಳೆಗಳಿಗೆ ನಾವು ಪಂಕಜ ಎಂದು ಕರೆಯುತ್ತೇವೆಯೇ? ಇಲ್ಲ. ಕೆಸರಿನಲ್ಲಿ ಸೊಳ್ಳೆ, ಹುಲ್ಲು, ಕಪ್ಪೆ ಯಾವುದು ಹುಟ್ಟಿದರೂ ಸಹ ರೂಢಿಯ ಬಲದಿಂದ ಕಮಲಕ್ಕೆ ಮಾತ್ರ ಪಂಕಜ ಕರೆಯುತ್ತೇವೆ.ಅಂದರೆ ರೂಢಿಯಬಲದಿಂದ ಕೆಸರಿನಲ್ಲಿ ಹುಟ್ಟುವ ಎಲ್ಲಾ ಕ್ರಿಮಿಕೀಟಗಳನ್ನು ಬಿಟ್ಟು ಕಮಲಕ್ಕೆ ಮಾತ್ರ ಪಂಕಜ ಎಂದು ಕರೆಯಲಾಗಿದೆ. ಇಲ್ಲಿ ಯೌಗಿಕ ಅರ್ಥವೂ ಇದೆ, ಆದರೆ ರೂಢಿಯಬಲದಿಂದ ಅದನ್ನು ಸಂಕುಚಿತಗೊಳಿಸಿ ಕೇವಲ ಕಮಲ ಎಂದು ಕರೆಯಲಾಗಿದೆ. ಇದು ಯೋಗರೂಢಾರ್ಥಕ್ಕೆ ಉಧಾಹರಣೆ. ಈಗ ಅಶ್ವದ ಅರ್ಥ ನೋಡುವಾಗ ಅಶ್ವ ಎಂದರೆ ಯಾವುದು ತಿನ್ನುತ್ತದೋ ಅದು , ಎಂದಾಗ ಕುದುರೆಯು ದಾರಿಯನ್ನುತಿನ್ನುತ್ತದೆ ಅರ್ಥಾತ್ ಕಡಿಮೆ ಮಾಡುತ್ತದೆ , ಹಾಗಾಗಿ ದಾರಿಯನ್ನು ಕುದುರೆ, ವಾಹನ, ಇತ್ಯಾದಿ ಯಾವುದೇ ಕಡಿಮೆ ಮಾಡಿದರೂ ಅದನ್ನು ಸಂಕುಚಿತ ಗೊಳಿಸಿ ಅಶ್ವ ಎಂದರೆ ಕುದುರೆ ಎಂದು ಕರೆಯಲಾಯ್ತು. ಯಾಸ್ಕರು ಹೇಳುತ್ತಾರೆ....ಅಶ್ನಾತಿ ಅದ್ವಾನಂ ಇತಿ ಅಶ್ವ: , ಅದ್ವಾನ ಎಂದರೆ ರಸ್ತೆ, ಯಾವುದು ರಸ್ತೆಯನ್ನು ತಿನ್ನುತ್ತದೋ ಅದು ಅಶ್ವ. ಅಂದರೆ ಕುದುರೆಯು ರಸ್ತೆಯನ್ನು ತಿನ್ನುತ್ತದೆ, ಅಂದರೆ ಕ್ರಮಿಸಿ ಕಡಿಮೆ ಮಾಡಿಕೊಡುತ್ತದೆ ಆದ್ದರಿಂದ ಅಶ್ವ ಎಂದರೆ ಕುದುರೆ ಎಂದು ಅರ್ಥೈಸ ಬಹುದು. ಆದರೆ ಇಷ್ಟಕ್ಕೆ ನಿಲ್ಲುವಂತಿಲ್ಲ. ನಿಂತರೆ ಪೂರ್ಣ ಅರ್ಥ ವಾಗುವುದಿಲ್ಲ. ತಿನ್ನುವುದೆಲ್ಲವೂ ಅಶ್ವವೇ. ಅಂದರೆ ಯಾಸ್ಕರಾಚಾರ್ಯರು ಹೇಳುತ್ತಾರೆ....ವೇದವನ್ನು ಅರ್ಥಮಾಡಿಕೊಳ್ಳುವಾಗ ಮೂಲ ಧಾತುವಿಗೆ ಹೋಗಬೇಕು, ಯಾವುದು ತಿನ್ನುತ್ತದೋ, ಯಾವುದು ಗ್ರಹಿಸುತ್ತದೋ, ಅದು ಅಶ್ವ. ಅಂದರೆ ನಮ್ಮ ಪಂಚೇಂದ್ರಿಯಗಳು. ಕಣ್ಣು ದೃಷ್ಟಿಯನ್ನು, ಕಿವಿ ಶಬ್ಧವನ್ನು, ಚರ್ಮವು ಸ್ಪರ್ಷವನ್ನು, ನಾಲಿಗೆ ರುಚಿಯನ್ನು ಮತ್ತು ಮೂಗು ವಾಸನೆಯನ್ನು ಗ್ರಹಿಸುತ್ತವೆ. ಆದ್ದರಿಂದ ಅಶ್ವ ವೆಂದರೆ ನಮ್ಮ ಪಂಚೇಂದ್ರಿಯಗಳು. ಮೇಧ ಎಂದಾಗ ಒಂದು ಅರ್ಥ ಬಲಿಕೊಡು ಎಂದಾದರೆ ಮೇಧೃ ಧಾತುವಿನ ಮತ್ತೊಂದು ಅರ್ಥ ಸಂಗಮೇ. ಅಂದರೆ ಒಟ್ಟುಗೂಡಿಸು. ಅಂದರೆ ಇಂದ್ರಿಯ ನಿಗ್ರಹಿಸು ಎಂದರ್ಥ. ಅಂದರೆ ಅಶ್ವಮೇಧ ಯಾಗ ವೆಂದರೆ ನಿಂದ್ರಿಯ ನಿಗ್ರಹ ಮಾಡುವ ಯಜ್ಞ ಎಂದರ್ಥ. ಅಶ್ವಮೇಧ ಯಾಗದ ಮಂತ್ರಗಳ ಸರಿಯಾದ ಅರ್ಥವನ್ನು ತಿಳಿದುಕೊಂಡಾಗ ನಮ್ಮ ಇಂದ್ರಿಯ ನಿಗ್ರಹ ಮಾಡಲು ಏನು ಮಾಡಬೇಕೆಂಬುದು ಅದರ ಸಾರ. ಶತಪತ ಬ್ರಾಹ್ಮಣದಲ್ಲಿ ಹೇಳುತ್ತಾರೆ " ಅಶ್ವಂ ಇತಿ ರಾಷ್ಟ್ರಂ"..........[ಮುಂದುವರೆಯಲಿದೆ]

No comments: