Saturday, July 18, 2009

ಚಾತುರ್ವರ್ಣ

ಋಗ್ವೇದ ಸಂಹಿತೆಯ ೧೦ನೇಮಂಡಲದ ೮ನೇ ಅಷ್ಟಕದ ೯೦ನೇ ಸೂಕ್ತದ ೧೨ನೇ ಮಂತ್ರ...

ಬ್ರಾಹ್ಮಣೋಸ್ಯ ಮುಖಮಾಸೀತ್ |ಬಾಹೂ ರಾಜನ್ಯಕೃತ:| ಊರೂ ತದಸ್ಯಯದ್ವೈಶ್ಯ:| ಪದ್ಭ್ಯಾಂ ಶೂದ್ರೋ ಅಜಾಯತ|

ವೇದದಲ್ಲಿ ಪುಸುಷಸೂಕ್ತದ ಈ ಮಂತ್ರಭಾಗವು ನಮಗೆಲ್ಲಾ ಪರಿಚಿತ. ಕಾಲಕ್ರಮದಲ್ಲಿ ಬಹಳಷ್ಟು ಅಪಾರ್ಥಕ್ಕೆ ಕಾರಣವಾಗಿರುವುದೂ ಇದೇ ಭಾಗ.

ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ-ಇವು ಹುಟ್ಟಿನಿಂದ ಬರುವಂತಹದ್ದಲ್ಲ.ರೂಢಿಯಲ್ಲಿ ಜಾತಿಎಂದು ಗುರುತಿಸಿಕೊಂಡಿರುವ ಈ ವ್ಯವಸ್ಥೆ ಜಾತಿಯಲ್ಲ. ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ-ಎಂಬುದು ವರ್ಣವ್ಯವಸ್ಥೆ. ಜಾತಿಯೇ ಬೇರೆ.ವರ್ಣವೇ ಬೇರೆ.ಅನೇಕ ವಿದ್ವಾಂಸರುಗಳೂ ಕೂಡ ಈ ಎರಡು ಪದಗಳ ಅರ್ಥವನ್ನು ಸರಿಯಾಗಿ ಮಾಡದಿರುವುದರಿಂದ ನಾವೆಲ್ಲಾ ಗೊಂದಲದಲ್ಲಿ ಸಿಲುಕಿದ್ದೇವೆ. ಜಾತಿ ಎಂದರೆ ಹುಟ್ಟಿನಿಂದ ಬರುವಂತಹದ್ದು ಎಂದು ಅರ್ಥ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ-ಎಂಬುದು ಹುಟ್ಟಿನಿಂದ ಬರುವಂತದ್ದಲ್ಲ. ಇದನ್ನು ವರ್ಣ ಎಂದು ಹೇಳುವರು. ವರ್ಣ ವೆಂದರೇನು? ಅದರ ಮೂಲಧಾತುವಿನಿಂದ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ವರ್ಣದ ಮೂಲಧಾತು ವೃ-ವರಣೆ ಅಂದರೆ ಆರಿಸುವಿಕೆ.ಯಾವುದನ್ನು ಆರಿಸಿಕೊಳ್ಳುತ್ತೇವೋ ಅದು ವರ್ಣ.ಆರಿಸಿಕೊಳ್ಳಲು ಇಲ್ಲಿ ಅವಕಾಶವಿದೆ ,ಎಂಬುದು ಗಮನಾರ್ಹ.ನಮಗೆ ಇಲ್ಲಿ ಆರಿಸಿಕೊಳ್ಳುವುದಕ್ಕೆ ಸ್ವಾತಂತ್ರ್ಯವಿದೆ.ಆರಿಸಿಕೊಂಡು ಸಾಧನೆಮಾಡಿ ತನ್ನದಾಗಿಸಿಕೊಳ್ಳುವುದು ವರ್ಣ. ಹುಟ್ಟಿನಿಂದ ಬರುವುದು ಜಾತಿ. ಇಲ್ಲಿ ಆರಿಸಿಕೊಳ್ಳಲು ಸಾಧ್ಯವಿಲ್ಲ.ಒಂದು ಸಣ್ಣ ಉಧಾಹರಣೆ ನೋಡೋಣ. ಆಗತಾನೇ ಹುಟ್ಟಿದ ಹತ್ತು ಮಕ್ಕಳನ್ನು [ಅದು ಈಗ ನಾವು ಹೇಳುವಂತೆ ಯಾವುದೇ ಜಾತಿಗೆ ಸೇರಿರಲಿ]ಒಟ್ಟಿಗೆ ಮಲಗಿಸಿದಾಗ ಇದು ಬ್ರಾಹ್ಮಣ, ಇದು ಲಿಂಗಾಯಿತ, ಇದು ಮುಸ್ಲಿಮ್, ಇದು ಕ್ರೈಸ್ತ ಮಗುವೆಂದು ವಿಭಾಗಿಸಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಅದರೆ ಅದೇ ಮಕ್ಕಳೊಡನೆ ಒಂದು ನಾಯಿಮರಿ, ಒಂದು ಬೆಕ್ಕಿನಮರಿಯನ್ನು ಮಲಗಿಸಿದರೆ,ಆಗ ಇದು ಮನುಷ್ಯ, ಇದು ನಾಯಿ, ಇದು ಬೆಕ್ಕು ಎಂದು ವಿಭಾಗಿಸಲು ಸಾಧ್ಯ. ಅಲ್ಲವೇ? ಆದ್ದರಿಂದ ಹುಟ್ಟಿನಿಂದ ಬಂದಿದ್ದು ಮನುಷ್ಯ ಜಾತಿ ಮಾತ್ರ ಎಂದಾಯ್ತಲ್ಲವೇ? ಜಾತಿ ಎಂದರೇನು? "ಸಮಾನ ಪ್ರಸವಾತ್ಮಿಕಾ ಜಾತಿ:" ಅಂದರೆ ತನ್ನಂತದೇ ಸಂತಾನಕ್ಕೆ ಜನ್ಮನೀಡುವುದು ಜಾತಿ.ಕುರಿಯೊಂದು ಕುರಿಮರಿಗೆ, ಆಡು ಆಡಿಗೆ, ಕೋತಿಯು ಕೋತಿಗೆ ಮತ್ತು ಮನುಷ್ಯ ಮನುಶ್ಯನಿಗೆ ಜನ್ಮ ನೀಡುವುದರಿಂದ ಇವುಗಳನ್ನು ಕುರಿ,ಆಡು, ಕೋತಿ ಮತ್ತು ಮನುಷ್ಯ ಜಾತಿ ಎಂದು ಬೇರೆ ಬೇರೆ ಹೇಳಬಹುದು. ಹುಟ್ಟಿನಿಂದ ಬರುವ, ತನ್ನದೇರೀತಿಯ ಮರಿಗೆ ಸಂತಾನ ನೀಡುವ , ಸಾಯುವ ವರೆಗೂ ಹಾಗೆಯೇ ಇರುವುದಕ್ಕೆ ಜಾತಿ ಎಂದು ಹೇಳುವರು. ಕುರಿಯೊಂದು ಕುರಿಮರಿಗೆ ಮಾತ್ರವೇ ಜನ್ಮ ನೀಡಬಲ್ಲದು ಮತ್ತು ಸಾಯುವ ವರೆಗೂ ಅದು ಕುರಿಯೇ ಆಗಿರುತ್ತದೆ. ಅದರ ಜಾತಿ ಬದಲಾವಣೆ ಆಗುವುದಿಲ್ಲ. ಜಾತಿ ಪದದ ಅರ್ಥ ಇರುವುದು ಹೀಗೆ. ಜನ್ಮನ ಜಾತಿ: ಅಂದರೆ ಹುಟ್ಟಿನಿಂದ ಜಾತಿ.ನಾವು ಜಾತಿ ಎಂದು ವಿಚಾರ ಮಾಡುವುದೇ ಆದರೆ ಹುಟ್ಟಿನಿಂದ ಬಂದದ್ದು ಅದು ಮನುಷ್ಯ ಜಾತಿ ಮಾತ್ರ.ಇದು ಸಹಜವಾಗಿ ಪ್ರಾಕೃತವಾಗಿ ಉಂಟಾಗಿರುವ ವಿಭಾಗ. ವರ್ಣ ವಾದರೋ ನಮ್ಮ ಗುಣಕರ್ಮಕ್ಕನುಸಾರವಾಗಿ, ನಮ್ಮ ಆಸಕ್ತಿ, ಸಾಮರ್ಥ್ಯಕ್ಕನುಗುಣವಾಗಿ ನಾವು ಆರಿಸಿಕೊಂಡಿದ್ದು.ಆದರೆ ತಪ್ಪು ಹೇಗಾಗಿದೆ ಎಂದರೆ ಬ್ರಾಹ್ಮಣನ ಮಗನೂ ಬ್ರಾಹ್ಮಣ,ಶೂದ್ರನ ಮಗ ಶೂದ್ರ, ಹೀಗೆಲ್ಲಾ ತಪ್ಪು ರೂಢಿಯಲ್ಲಿ ಬಂದುಬಿಟ್ಟಿದೆ. ಇದು ಎಷ್ಟು ಮೂರ್ಖತನದ ಪರಮಾವಧಿ ಎಂದರೆ ವೈದ್ಯನಮಗ ವೈದ್ಯ, ಇಂಜಿನಿಯರ್ ಮಗ ಇಂಜಿನಿಯರ್ ಎಂದರೆ ಎಷ್ಟು ಹೊಂದುವುದಿಲ್ಲವೋ ಇದೂ ಹಾಗೆಯೇ ಹೊಂದದ ವಿಚಾರ.ಅಪ್ಪ ಇಂಜಿನಿಯರ್ ಆದ ಮಾತ್ರಕ್ಕೆ ಮಗ ಇಂಜಿನಿಯರ್ ಆಗಲು ಸಾಧ್ಯವಿಲ್ಲ. ಇದು ಅವನ ಆರಿಸಿಕೊಳ್ಳುವಿಕೆ, ಶ್ರಮ, ಸಾಧನೆಯಿಂದ ಮಾತ್ರ ಬರುವಂತಹದ್ದು, ಆರಿಸಿಕೊಂಡಿದ್ದು ವರ್ಣ.

ಜೀವನ ಕ್ರಮದ ವೆತ್ಯಾಸವನ್ನು ಒಂದು ಸೂತ್ರರೂಪದಲ್ಲಿ ಹೀಗೆ ಹೇಳಬಹುದು.

ಸಮಾಜವನ್ನು ನಾಶಮಾಡುವ ನಾಲ್ಕು ದುಷ್ಟಶಕ್ತಿಗಳಿವೆ. ಯಾವ ಸಮಾಜದಲ್ಲಿಈ ನಾಲ್ಕು ದುಷ್ಟಶಕ್ತಿಗಳು ನಾಶವಾಗುತ್ತದೋ ಆ ಸಮಾಜವು ಪ್ರಗತಿಯನ್ನು ಹೊಂದುತ್ತದೆ.ಆ ದುಷ್ಟಶಕ್ತಿಗಳೆಂದರೆ...

ಒಂದು ಅಜ್ಞಾನ,ಎರಡನೆಯದು ಅನ್ಯಾಯ,ಮೂರನೆಯದು ಅಭಾವ ಮತ್ತು ನಾಲ್ಕನೆಯದು ಆಲಸ್ಯ. ಈ ನಾಲ್ಕೂ ದುಷ್ಟಶಕ್ತಿಗಳಿದ್ದಾಗ ಯಾವ ಸಮಾಜವು ಪ್ರಗತಿಹೊಂದಲು ಸಾಧ್ಯ?

ಯಾವಾಗ ಅಜ್ಞಾನವೆಂಬುದು ಹೋಗುತ್ತದೆ,ಆಗ ಜ್ಞಾನವು ಲಭಿಸುತ್ತದೆ,ಈ ಅಜ್ಞಾನದವಿರುದ್ಧ ಹೋರಾಡಿದವನು ಬ್ರಾಹ್ಮಣನೆನಿಸಿದನು. ಇಲ್ಲಿ ಮತ್ತೆ ಜಾತಿ ಗಣನೆಗೆ ಬಾರದು.ಅವನ ಸ್ವಂತ ಯೋಗ್ಯತೆ, ಸಾಧನೆಯ ಮೇಲೆ ಅವನು ಬ್ರಾಹ್ಮಣನಾಗುತ್ತಾನೆ, ಅವನು ಯಾರ ಹೊಟ್ಟೆಯಲ್ಲಿ ಹುಟ್ಟಿದನೆಂಬುದು ಇಲ್ಲಿ ನಗಣ್ಯ. ಅವನು ಶ್ರಮ ವಹಿಸಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾನಾದ್ದರಿಂದ ಅವನು ಇಂಜಿನಿಯರ್, ಅಥವಾ ವೈದ್ಯಕೀಯ ಓದಿದ್ದರೆ ಡಾಕ್ಟರ್ ಅಥವಾ ಮತ್ಯಾರೋ.ಅವನು ಯಾರ ಮಗನೆಂಬುದು ಇಲ್ಲಿ ಗಣನೆಗೆ ಬರುವುದಿಲ್ಲ. ಅಜ್ಞಾನದ ವಿರುದ್ಧವಾಗಿ ಇವನು ಹೋರಾಡುತ್ತಿದ್ದಾನಾದ್ದರಿಂದ ಇವನು ಬ್ರಾಹ್ಮಣ. ಇವನು ಯಾರ ಹೊಟ್ಟೆಯಲ್ಲಿ ಹುಟ್ಟಿದ್ದರೇನು? ಅವನ ಹೆಸರು ಮಕಂದರ್ ಆದರೇನು? ಪೀರ್ಆದರೇನು? ಅವನು ಅವನ ಗುಣಕರ್ಮ ಸ್ವಭಾವದಿಂದ ಬ್ರಾಹ್ಮಣತ್ವ ಗಳಿಸಿದ್ದಾನಾದ್ದರಿಂದ ಅವನು ಬ್ರಾಹ್ಮಣ.ಅವರ ಅಪ್ಪ ಯಾರೂ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿಲ್ಲ.ಅವನ ಸಾಧನೆ ಏನು, ಅವನು ಸಮಾಜದ ಅಜ್ಞಾನ ಹೋಗಲಾಡಿಸಲು ಹೋರಾಡುತ್ತಿದ್ದರೆ, ಅವನು ಬ್ರಾಹ್ಮಣ.

--------------------------------------------------------

ಅನ್ಯಾಯ, ಅಭಾವ, ಆಲಸ್ಯ ಗಳ ವಿರುದ್ಧ ಹೋರಾಡುವವರ ಬಗ್ಗೆ ಮುಂದಿನ ಭಾಗದಲ್ಲಿ ಬರೆಯುವೆ.

1 comment:

RMD CRC Duttargaon said...

ಇದರ ಅವಶ್ಯಕತೆ ಏನಿದೆ..ಈ ಅಸಮಾನತೆಯಿಂದ ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆ ಬಿಟ್ಟು ಹೋರ ಬನ್ನಿ ಸಾಕು..